ಹುಸಿ ಜನಪ್ರಿಯತೆಯಿಂದ ದೂರವಿದ್ದು ಪ್ರೀತಿಸುವ , ಜನಪರ ಮನೋಧರ್ಮವನ್ನು ತಳೆಯಬೇಕು : ಬೇಲೂರು ರಘುನಂದನ್

ಹುಸಿ ಜನಪ್ರಿಯತೆಯಿಂದ ದೂರವಿದ್ದು ಪ್ರೀತಿಸುವ , ಜನಪರ ಮನೋಧರ್ಮವನ್ನು ತಳೆಯಬೇಕು : ಬೇಲೂರು ರಘುನಂದನ್




( ಹಾಸನ ಜಿಲ್ಲೆಯ ಬೇಲೂರಿನ ಸಾಹಿತಿಗಳು ಹಾಗೂ ತಾಲ್ಲೂಕು ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದರೊಂದಿಗೆ ಕವಿ ಕಾವ್ಯ ಸುಧೆ ನಡೆಸಿದ ಸಂದರ್ಶನ ) 

ಹಾಸನ ಜಿಲ್ಲೆಯ ಶಿಲ್ಪ ಕಲೆಗಳ ನಾಡಿನ  ಬೇಲೂರು ಪಟ್ಟಣದ ಸಂಜಾತರು. ಬೇಲೂರಿನಲ್ಲಿ ಪದವಿ ಪಡೆದು , ಹಾಸನದ ಹೇಮಗಂಗೋತ್ರಿಯಲ್ಲಿ ಚಿನ್ನದ ಪದಕಗಳೊಂದಿಗೆ ಎಂ . ಎ . , ಪದವಿ ಪಡೆದು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ . ಫಿಲ್ .,ಮುಗಿಸಿ , ಪಿಹೆಚ್ . ಡಿ ಸಂಶೋಧನೆ ನಡೆಸುತ್ತಿದ್ದಾರೆ, ಕನ್ನಡ ಸಹಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಶ್ರೀಯುತರು ಬೆಂಗಳೂರಿನ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,
ಕವನಸಂಕಲನಗಳು , ಕಟ್ಟುಪದಗಳು , ಮಕ್ಕಳ ಸಾಹಿತ್ಯ , ಪ್ರವಾಸಸಾಹಿತ್ಯ , ಅಂಕಣಗಳು , ನಾಟಕಗಳು , ಕಥೆಗಳು ಮುಂತಾಗಿ ಸಾಹಿತ್ಯಸೃಷ್ಟಿ ಮಾಡಿದ್ದಾರೆ ; ಸಾಹಿತ್ಯಸಂಪಾದನಾ ಕಾರ್ಯವನ್ನೂ ನಿರ್ವಹಿಸಿದ್ದಾರೆ . ಈ ತನಕ ಇವರ ೩೦ಕ್ಕೂ ಹೆಚ್ಚು ಕೃತಿಗಳು ಬೆಳಕು ಕಂಡಿವೆ . ಕೆಲವು ಕೃತಿಗಳು ವಿವಿಧ ಭಾಷೆಗಳಿಗೆ ಅನುವಾದಿತವಾಗಿವೆ .

ಪ್ರಶ್ನೆ : ನಿಮ್ಮ ತಂದೆ ತಾಯಿ ಮತ್ತು ನಿಮ್ಮ ಊರಿನ ಪರಿಚಯ ತಿಳಿಸಿ.
ನಾನು ಹುಟ್ಟಿ ಬೆಳದದ್ದು ಎಲ್ಲ ಬೇಲೂರಿನಲ್ಲಿ. ನಮ್ಮ ಮನೆ ಇದ್ದದ್ದು ದೇವಾಂಗ ಬೀದಿಯಲ್ಲಿ. ನಮ್ಮ ತಾಯಿ ಸುಬ್ಬಲಕ್ಷ್ಮಿ. ತಂದೆ ರಮೇಶ್. ಬಿ.ಆರ್. ನನ್ನನ್ನು ಸಾಕಿದ್ದು ನನ್ನ ಅಜ್ಜಿ ಸರೋಜಮ್ಮನವರು ಮತ್ತು ಬಿ.ಎಸ್.ರಾಜಣ್ಣನವರು. ಬೇಲೂರು ನನ್ನ ಭಾವಕೋಶದಲ್ಲಿ ಅದಮ್ಯ ಪ್ರೀತಿ, ನೋವು, ಸಂಕಟ, ಅವಮಾನ ಎಲ್ಲವುಗಳ ಸಾವಯವ ರೂಪದಂತೆ ಆವರಿಸಿಕೊಂಡಿದೆ.

ಪ್ರಶ್ನೆ : ತಮ್ಮ ವಿದ್ಯಾಭ್ಯಾಸದ ಕುರಿತು ಒಂದಷ್ಟು ತಿಳಿಸಿ.
ನನಗೆ ಮೊದಲು ಅಕ್ಷರ ತಿದ್ದಿಸಿದ್ದು ಸೌಮ್ಯನಾಯಕಿ ಶಿಶುವಿಹಾರದ ಇಂದಿರಮ್ಮನವರು, ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೇಲೂರಿನ ಬಾಪೂಜಿ ವಿದ್ಯಾ ಸಂಸ್ಥೆ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಜ್ಞಾನ ಜ್ಯೋತಿ ವಿದ್ಯಾ ಮಂದಿರದಲ್ಲಿ ಮಾಡಿದೆ. ಬೇಲೂರಿನ ಸರ್ಕಾರಿ ಎಚ್.ಪಿ.ಬಿ.ಎಸ್.ಶಾಲೆಯಲ್ಲಿ  ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಣ. ಜೂನಿಯರ್ ಕಾಲೇಜು ಬೇಲೂರು ಇಲ್ಲಿ ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ ಬೇಲೂರಿನ ಹೊಯ್ಸಳ ಕಾಲೇಜು, ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಐಚ್ಚಿಕ ವಿದ್ಯಾರ್ಥಿಯಾಗಿ ಪದವಿ, ಮೈಸೂರು ವಿಶ್ವವಿದ್ಯಾಲಯ ಹೆಮಗಂಗೊತ್ರಿ ಹಾಸನದ ಹೇಮಗಂಗೋತ್ರಿಯಲ್ಲಿ ಕೆ.ವಿ.ಪುಟ್ಟಪ್ಪ ಚಿನ್ನದ ಪದಕಗಳೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ, ಎಂ.ಫಿಲ್.ಮತ್ತು ಪಿಹೆಚ್.ಡಿ ಪದವಿ ಕನ್ನಡ ವಿಶ್ವ ವಿದ್ಯಾಲಯ ಹಂಪಿಯಲ್ಲಿ ಅಭ್ಯಾಸ. ಇದಲ್ಲದೇ ಗಮಕ ವಿದುಷಿ ಬಿ.ಕೆ.ವನಮಾಲ ಅವರಲ್ಲಿ ಐದು ವರ್ಷ ಗಮಕ ಅಭ್ಯಾಸ ಮಾಡಿ ಪಾರೀಣ ಪರೀಕ್ಷೆಯಲ್ಲಿ ಉತ್ತೀರ್ಣ 

ಪ್ರಶ್ನೆ : ಬಾಲ್ಯದ ಸವಿ ನೆನಪಿನ ಕ್ಷಣಗಳು? 
ಬಾಲ್ಯ ಎಲ್ಲರ ಬದುಕಿನಲ್ಲೂ ಬಣ್ಣ ಬಣ್ಣದ ಸುಂದರ ಚಿತ್ರಗಳನ್ನು ಮೂಡಿಸುತ್ತದೆ. ಆದ್ರೆ, ಬಾಲ್ಯದಲ್ಲಿ ನನ್ನನ್ನು ಸಂಪೂರ್ಣ ಆವರಿಸಿಕೊಂಡದ್ದು ನೋವು, ಹಿಂಸೆ, ಅವಮಾನ ಹಾಗೂ ದೌರ್ಜನ್ಯಗಳೇ. ನನಗೆ ಬಾಲ್ಯವೆಂದರೆ ಚಾಕೆಲೇಟು, ಆಟಿಕೆ, ಮಕ್ಕಳ ಜೊತೆ ಆಟಪಾಠ ಇದಾವ ನೆನಪುಗಳೂ ಇಲ್ಲ. ಬಾಲ್ಯದಲ್ಲಿ ಎದುರಾದ ಭಯ ಮತ್ತು ಅಭದ್ರತೆಗಳೇ ನನ್ನನ್ನು ರೂಪಿಸಿವೆ.

ಪ್ರಶ್ನೆ : ವೃತ್ತಿ ಬದುಕನ್ನ ಆರಂಭಿಸಿದ್ದು ಹೇಗೆ ಮತ್ತು ಎಲ್ಲಿ? 
ನನ್ನ ವೃತ್ತಿ ಬದುಕು ಆರಂಭವಾಗಿದ್ದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಾನು ಏಳನೇ ತರಗತಿಯಲ್ಲಿದ್ದಾಗಲೇ ಒಂದು, ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಪಾಠ ಮಾಡುತ್ತಿದ್ದೆ. ಎರಡರಿಂದ ಐದು ರೂಪಾಯಿಗಳ ತನಕ ಫೀಸ್ ಕೊಡುತ್ತಿದ್ದರು. ನಂತರ ಬೇಲೂರಿನ ನೇತಾಜಿ ಶಾಲೆಯಲ್ಲಿ ಪಾಠ ಮಾಡುತ್ತಲೇ ಪೌಢ,ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿದೆ. ಬೇಲೂರಿನ ಶಾಂತಲ ಪದವಿ ಕಾಲೇಜು, ಹೊಯ್ಸಳ ಕಾಲೇಜು ಮತ್ತು ಸರ್ವೋದಯ ಶಾಲೆಗಳಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ ನಂತರ 2009 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆ ಆದೆ. ಈ ಹಿಂದೆ ಒಂದು ವರ್ಷ ಉದಯ ಟಿ.ವಿಯಲ್ಲೂ ಕಾರ್ಯಕ್ರಮ ನಿರ್ವಾಹಕನಾಗಿ ಕಾರ್ಯನಿರ್ವಹಿಸಿದ್ದೇನೆ. ಪಾಠ ಮಾಡುವುದಲ್ಲದೇ ನನ್ನ ವೃತ್ತಿ ಬದುಕಿನ ಆರಂಭದಿಂದಲೇ ನೃತ್ಯ ಮತ್ತು ನಾಟಕಗಳನ್ನು ಹೇಳಿಕೊಡುತ್ತಿದ್ದೆ. ಜೊತೆಗೆ ಸುಮಾರು ಹತ್ತು ವರ್ಷ ಬೇಲೂರಿನ ಮಕ್ಕಳಿಗೆ ಮನೆಪಾಠ ಮಾಡಿದ್ದೇನೆ. ಈ ಎಲ್ಲಾ ಲೆಖ್ಖಾಚಾರದಲ್ಲಿ ನಾನು ಪಾಠ ಮಾಡಲು ಹಾಗೂ ನಾಟಕ ನೃತ್ಯ ಮಾಡುತ್ತಾ, ಹೇಳಿಕೊಡುತ್ತಾ ಬದುಕು ಶುರುವಾಗಿ ಸುಮಾರು ಇಪ್ಪತ್ಮೂರು ವರ್ಷಗಳಿಗಿಂತ ಹೆಚ್ಚಾಗಿದೆ.

ಪ್ರಶ್ನೆ : ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆಯಾಗಿದ್ದು ಮತ್ತು ಸಾಹಿತ್ಯದ ಒಲವು ಬಂದಿದ್ದು  ಹೇಗೆ?  
ನಾನು ಹೈ ಸ್ಕೂಲಿನಲ್ಲಿದ್ದಾಗ ಸಿ.ಕೆ. ವಾಸುಕಿ ನನ್ನಲ್ಲಿ ಪದ್ಯಗಳನ್ನು ಬರೆಸುತ್ತಿದ್ದರು. ನಂತರ ನನ್ನ ಬಳಿ ಶಿವ, ಕೃಷ್ಣನ ವೇಷಗಳನ್ನು ಹಾಕಿಸಿ ನಾಟಕ ಮಾಡಿಸುತ್ತಿದರು. ಅಲ್ಲಿಂದ ಮೂಡಿದ ಸಾಹಿತ್ಯಾಸಕ್ತಿ ಇಲ್ಲಿಯ ತನಕ ಕರೆತಂದಿದೆ. ಪ್ರಕಾಶ್, ಎ.ಎಸ್. ಕಾಳೆಗೌಡ್ರು, ಮತ್ತು ಮಳಲಿ ವಸಂತ್ ಕುಮಾರ್ ಅವರು ಸಾಹಿತ್ಯಪ್ರೇಮ ಉಂಟಾಗಲು ಮೊದಲ ಬೀಜ ಬಿತ್ತಿದರು. 

ಪ್ರಶ್ನೆ :  ಸಾಹಿತ್ಯ ಕ್ಷೇತ್ರದ ನಿಮ್ಮ ಸಾಧನೆಗೆ ಪ್ರಭಾವಿಸಿದವರು ಯಾರು?
ಕುವೆಂಪು ಮತ್ತು ನನ್ನ ಅಜ್ಜಿ 

ಪ್ರಶ್ನೆ : ಯುವ ಸಾಹಿತಿಗಳಿಗೆ ನಿಮ್ಮಿಂದ ಏನಾದರೂ ಕಿವಿ ಮಾತು?
ಕನ್ನಡ ಸಾಹಿತ್ಯ ಪರಂಪರೆಯನ್ನು ಮತ್ತೆ ಮತ್ತೆ ಓದಿನ ಮೂಲಕ ಮುಖಾಮುಖಿಯಾಗಬೇಕು. ನಮ್ಮನ್ನು ರೂಪಿಸುತ್ತಿರುವ ಹುಸಿ ಜನಪ್ರಿಯತೆಯಿಂದ ದೂರವಿರಬೇಕು. ಜೀವಪರ ಮನೋಧರ್ಮವನ್ನು ತಳೆಯಬೇಕು. ಪ್ರೀತಿಸುವದನ್ನು ಕಲಿಯುತ್ತಲೇ ಕಾರುವ ಮನಸ್ಥಿತಿಯಿಂದ ದೂರಾಗಬೇಕು. ಇದೆಲ್ಲಾ ನನಗೆ ನಾನು ಹೇಳಿಕೊಳ್ಳುವ ಮಾತು ಕೂಡ.

ಪ್ರಶ್ನೆ  : ತಾವು ರಂಗಕರ್ಮಿಯವೂ ಹೌದು.? ಇದಕ್ಕೆ ಪ್ರವೇಶ ಹೇಗಾಯ್ತು.? 
ಮೊದಲೇ ಹೇಳಿದೆ ಬೇಲೂರಿನ ಶಾಲಾ ಕಾಲೇಜುಗಳಿಗೆ ನೃತ್ಯ ಮತ್ತು ನಾಟಕಗಳನ್ನು ಹೇಳಿಕೊಡುತ್ತಿದೆ. ವಾರ್ಷಿಕೋತ್ಸವಗಳ ಕಾಲ ಬಂದರೆ ಬಿಡುವಿಲ್ಲದಷ್ಟು ಕೆಲಸ. ನಮ್ಮ ಶಾಲೆಗೆ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೇಳಿಕೊಡಿ ಎಂಬ ಬೇಡಿಕೆ ಬಹುವಾಗಿ ಇತ್ತು. ಸುಮಾರು 1996 ರಿಂದಲೇ ನಾನು ನೇತಾಜಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಮತ್ತು ನಾಟಕಗಳನ್ನು ಹೇಳಿಕೊಟ್ಟಿದ್ದೇನೆ. ನಂತರ ಬೇಲೂರಿನ ಬೇರೆ ಬೇರೆ ಶಾಲೆಗಳಲ್ಲಿ ಹಾಗೂ ಬೇಲೂರು ತಾಲೂಕಿನ ಸರ್ಕಾರಿ ಶಾಲೆಗಳಿಗೆ ಹೋಗಿ ಅಲ್ಲೇ ವಾರಗಟ್ಟಲೇ ಇದ್ದು ನಾಟಕ ಮತ್ತು ನೃತ್ಯವನ್ನು ಹೇಳಿಕೊಡುತ್ತಿದ್ದೆ. ಪಂಡಿತನಹಳ್ಳಿ ಮತ್ತು ಅಡವಿಬಂಟೆನ ಹಳ್ಳಿಯ ನೆನಪುಗಳು ನನ್ನಲ್ಲಿ ಮಾಸದಂತೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಈಗಲೂ ರಂಗಭೂಮಿಯಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದೇನೆ. 

ಪ್ರಶ್ನೆ : ನಾಟಕ ಅಕಾಡೆಮಿಯ ಸದಸ್ಯರು ಕೂಡ ಆಗಿದ್ದಿರಿ ನಿಮಗೆ ತೃಪ್ತಿ ನೀಡಿತಾ.? 
ಯಾವ ಕೆಲಸವೂ ಸಂಪೂರ್ಣ ತೃಪ್ತಿ ಎಂದು ನೀಡುವುದಿಲ್ಲ. ಒಬ್ಬ ಹಾಸನ ಜಿಲ್ಲೆಯ ಪ್ರತಿನಿಧಿಯಾಗಿ ನಮ್ಮ ಜಿಲ್ಲೆಗೆ ಇದುವರೆಗೂ ಪ್ರಶಸ್ತಿ ಮತ್ತು ಮಾನ್ಯತೆಯ ವಿಷಯದಲ್ಲಿ ಅನ್ಯಾಯವಾಗದಂತೆ ಕೆಲಸ ಮಾಡಿದ್ದೇನೆ. ಬೇಲೂರು ಕೃಷ್ಣಮೂರ್ತಿ, ಜಿಲ್ಲೆಯ ಉಲಿವಾಲ ಮೋಹನ್ ಕುಮಾರ್, ನಿಕೊಲಸ್, ಚೌಡಪ್ಪ ದಾಸರು, ಝಾಕಾವುಲ್ಲ ಖಾನ್, ಗ್ಯಾರಂಟಿ ರಾಮಣ್ಣ ಇವರುಗಳಿಗೆ ನಾಟಕ ಅಕಾಡೆಮಿಯ ಗೌರವ ಸಲ್ಲುವ ಹಾಗೆ ಕಾರ್ಯ ನಿರ್ವಹಿಸಿದ್ದೇನೆ. ಆದರೆ ರಾಜಕೀಯ ಕಾರಣಗಳಿಗಾಗಿ ನಮ್ಮ ನಂತರದ ಅಕಾಡೆಮಿ ಗ್ಯಾರಂಟಿ ರಾಮಣ್ಣನಂತಹ ಹಿರಿಯ ಕಲಾವಿದರಿಗೆ ನೀಡಿದ್ದ ಪ್ರಶಸ್ತಿಯನ್ನು ರದ್ದುಗೊಳಿಸಿದ್ದು ತೀವ್ರ ನೋವನ್ನು ಉಂಟು ಮಾಡಿದೆ. ಇದಲ್ಲದೇ ನಮ್ಮ ಅವಧಿಯಲ್ಲಿ ಸಂಶೋಧನಾ ಫೆಲೋಶಿಪ್, ನಾಟಕೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ರೂಪಿಸುವ ಕೆಲಸವನ್ನು ಮಾಡಿದ್ದೇನೆ.

ಪ್ರಶ್ನೆ: ಬೇಲೂರು ಜೀವನಕ್ಕೂ , ಬೆಂಗಳೂರು ಜೀವನಕ್ಕೂ ನಿಮ್ಮ ಅನುಭವವೇನೂ.? 
ಬೇಲೂರು ನನ್ನ ಆವರಿಸಿಕೊಂಡಿರ ಜೀವ ಕೇಂದ್ರ. ಬೆಂಗಳೂರಿನಲ್ಲಿಯೂ  ಬೇಲೂರನ್ನು  ನಿತ್ಯ ಕಾಣುತ್ತೇನೆ.

ಪ್ರಶ್ನೆ :ಇವತ್ತಿನ ಸಾಹಿತ್ಯ ಹೇಗಿರಬೇಕು ಅಂತ ನಿಮಗೆ ಅನ್ಸುತ್ತೆ?
ಜೀವಪರವಾಗಿರಬೇಕು. ಅವಿವೇಕದಿಂದ ದೂರವಿರಬೇಕು. ಯಾರ ಮನಸನ್ನು ನೋಯಿಸದಂತಿರಬೇಕು. ನೊಂದ ಮನಸುಗಳಿಗೆ ಸಾಂತ್ವನವನ್ನು ನೀಡುವಂತಿರಬೇಕು.  ಇದು ಈ ಕಾಲದ್ದು ಮಾತ್ರವಲ್ಲ, ಎಲ್ಲ ಕಾದದ್ದೂ ಕೂಡ. ಹೀಗೆ ಬಂದಿದೆ, ನಾವು ಹೀಗೆ ಚಲಿಸಬೇಕು ಮುಂದೆಯೂ ಕೂಡ.

ಪ್ರಶ್ನೆ : ಬೇಲೂರು ನಿಮಗೆ ಯಾವ ದಿಸೆಯಲ್ಲಿ ಬದಲಾಗಬೇಕು ಅನ್ಸುತ್ತೆ ? ಬೇಲೂರಿನಲ್ಲಿ ನಿಮ್ಮ ಪ್ರಕಾರ ಆಗಬೇಕಾದ ಬದಲಾವಣೆ ಏನು?
ಸಾಂಸ್ಕೃತಿಕ ಕೇಂದ್ರವಾಗಬೇಕು. ರಂಗಭೂಮಿ ಹೊಸ ರೂಪು ಪಡೆದು ಜೀವ ತಳೆಯಬೇಕು. ಏಕೆಂದರೆ ಬೇಲೂರಿಗೆ ಆ ಬಗೆಯ ಅನನ್ಯ ಗುಣವಿದೆ 

ಪ್ರಶ್ನೆ : ಸಾಹಿತ್ಯಿಕವಾಗಿ ಬೇಲೂರು ಯಾವ ದಿಕ್ಕಿನಲ್ಲಿ ಸಾಗಬೇಕು ಅಂಥ ನಿಮಗೆ ಅನ್ಸುತ್ತೆ?
ಈ ಪ್ರೆಶ್ನೆಗೆ ಉತ್ತರ ಕಾಲ ಮತ್ತು ಸಂದರ್ಭಗಳು ಉತ್ತರಿಸುತ್ತವೆ ಮತ್ತು ಉತ್ತರ ಕಂಡುಕೊಳ್ಳುತ್ತವೆ ಕೂಡ.

ಪ್ರಶ್ನೆ : ನಿಮ್ಮ ಸಾಹಿತ್ಯ ಕೃತಿಗಳ ಕುರಿತು  ಪರಿಚಯ ಮಾಡ್ಕೊಡಿ?
ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ,ಪ್ರವಾಸ ಸಾಹಿತ್ಯ, ಅಂಕಣ, ಕಥೆ, ಕಟ್ಟುಪದ, ವಿಮರ್ಶೆ ಹಾಗೂ ಸಂಶೋಧನಾ ಬರವಣಿಗೆಗಳನ್ನು ಬರೆದಿದ್ದೇನೆ ಮತ್ತು ಅಭ್ಯಾಸ ಮಾಡುತ್ತಿದ್ದೇನೆ.

ಪ್ರಶ್ನೆ : ಬೇಲೂರು ತಾಲ್ಲೂಕಿನ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದಿರಾ.? ನಿಮ್ಮ ಅಭಿಪ್ರಾಯ ಏನು.?
ಮೊದನೆಯ ಪ್ರೆಶ್ನೆಯಲ್ಲಿಯೇ ಉತ್ತರವಿದೆ. ಇನ್ನು ಈ ಬಗ್ಗೆ ಅಭಿಪ್ರಾಯ ಊರಿನ ಗೌರವ ತಾಯಿಯ ಮಡಿಲಿನಷ್ಟೇ ಭರವಸೆಯನ್ನು ತುಂಬುವಂಥದ್ದು.
ನಮಸ್ಕಾರ 

ಸಂದರ್ಶಕರು 
ನಿರಂಜನ್ ಎ ‌. ಸಿ ಬೇಲೂರು 
ಮುಖ್ಯಸ್ಥರು 
ಕವಿ ಕಾವ್ಯ ಸುಧೆ.
ಮೊ : 9844411838

Post a Comment

0 Comments