ಸೌಂದರ್ಯ , ಬಣ್ಣ , ಎತ್ತರ , ಜನಪ್ರಿಯತೆ , ಇದ್ಯಾವುದು ನಿರೂಪಣೆಗೆ ಮುಖ್ಯವಲ್ಲ : ಕು ಸೌಜನ್ಯ

ಸೌಂದರ್ಯ , ಬಣ್ಣ , ಎತ್ತರ , ಜನಪ್ರಿಯತೆ , ಇದ್ಯಾವುದು ನಿರೂಪಣೆಗೆ ಮುಖ್ಯವಲ್ಲ : ಕು ಸೌಜನ್ಯ
( ಅತ್ಯುತ್ತಮ ನಿರೂಪಕಿ, ರಂಗಭೂಮಿ ಕಲಾವಿದೆ , ಬರಹಗಾರ್ತಿ ಸೌಜನ್ಯಅಶೋಕ್ ಅವರೊಂದಿಗೆ ಕವಿ ಕಾವ್ಯ ಸುಧೆ ನಡೆಸಿದ ಸಂದರ್ಶನ ) 


ನಿರೂಪಣೆಯಿಂದಲೇ ಸಾಕಷ್ಟು ಜನರ ಮನದಲ್ಲಿ ಹೆಸರುಗಳಿಸಿರುವ ಸೌಜನ್ಯ ಅಶೋಕ್ ಅವರು ಉದಯೋನ್ಮುಖ ನಿರೂಪಕಿ, ರಂಗಭೂಮಿ ಕಲಾವಿದೆ , ಹಾಗೂ ಆರ್ ಜೆ.
ಶಿವಮೊಗ್ಗ ಜಿಲ್ಲೆಯ ಆನವಟಿಯ ಅಶೋಕ್ ಮಸಾಲ್ತಿ  ಅವರ ಪುತ್ರಿಯಾಗಿದ್ದು ,ದಿನಾಂಕ 18-05-1998 ರಂದು ಜನಿಸಿದರು.
ಇವರದ್ದು ಕೂಡು ಕುಟುಂಬ , ಹುಟ್ಟೂರು ಸೊರಬ ತಾಲೂಕು ಆನವಟ್ಟಿ , ಬೆಳೆದಿದ್ದು ಶಿವಮೊಗ್ಗ . ಹುಟ್ಟೂರು ಜೀವ , ಶಿವಮೊಗ್ಗ ಜೀವನ . ದೊಡ್ಡಪ್ಪ ಚಂದ್ರಶೇಖರ್ ಮಸಾಲ್ತಿ ಪ್ರತಿ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುತ್ತಿದ್ದಾರೆ , ಹೆಚ್ಚಿನದ್ದನ್ನ ಸಾಧಿಸಲು ಪ್ರೇರೆಪಿಸುತ್ತಿದ್ದಾರೆ , ಹೊಸ ಹೊಸ ಆಲೋಚನೆಗಳನ್ನು ಅವರಿಗೆ ಬಿತ್ತುತ್ತಿದ್ದಾರೆ .

ಪ್ರಶ್ನೆ :  ತಮ್ಮ ವಿದ್ಯಾಭ್ಯಾಸದ ಕುರಿತು ಒಂದಿಷ್ಟು ತಿಳಿಸಿ.? 
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹುಟ್ಟೂರಿನಲ್ಲಿ , ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿದ್ಯಾಭ್ಯಾಸದಲ್ಲಿ ಚಿಕ್ಕಂದಿನಂದಿಲೂ ಮುಂಚೂಣಿ . ಪ್ರಾಥಮಿಕ ಶಿಕ್ಷಣದಲ್ಲೆ ಚರ್ಚಾಸ್ಪರ್ಧೆ ಹಾಗೂ ಏಕಪಾತ್ರಾಭಿನಯದಲ್ಲಿ ರಾಜ್ಯಮಟ್ಟ ತಲುಪಿದ್ದೆ . ನಂತರ ಮುಂದಿನ ವಿದ್ಯಾಭ್ಯಾಸವೆಲ್ಲ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು . ಜೀವನದ ತಿರುವಿನ ಘಟ್ಟ ಸಹ್ಯಾದ್ರಿ ದಿನಗಳು . ಬೆಟ್ಟದಷ್ಟು ಕನಸು ಹೊತ್ತ ಹೋಗಿದ್ದ ನನಗೆ ನನ್ನೆಲ್ಲ ಕನಸುಗಳಿಗೆ ನೀರೆರೆದು ಪೋಷಿಸಿ ಹೊಸ ಅವಕಾಶಗಳತ್ತ ತೆರೆದುಕೊಳ್ಳುವಂತೆ ಮಾಡಿದ್ದು ಸಹ್ಯಾದ್ರಿ ಕಾಲೇಜಿನ ಕನ್ನಡ ಅಧ್ಯಾಪಕರು ಡಾ.ಮೋಹನ್ ಚಂದ್ರಗುತ್ತಿ . ನನ್ನ ನಾ ಆವಿಷ್ಕಾರಗೊಳಿಸಿಕೊಳ್ಳಲು , ಅನಾವರಣಗೊಳಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಿದ್ದು  NSS ರಾಷ್ಟ್ರೀಯ ಸೇವಾ ಯೋಜನೆ . ಸುಮಾರು 7 ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿಯಾಗಿರುವೆ , ಇದುವರೆಗೂ 15ಕ್ಕೂ ಹೆಚ್ಚು ಶಿಬಿರಗಳಲ್ಲಿ ಭಾಗವಹಿಸಿದ್ದೇನೆ . ಗ್ರಾಮೀಣ , ಜಿಲ್ಲಾ , ರಾಜ್ಯ ಮಟ್ಟದ ಶಿಬಿರಗಳನ್ನು ಒಳಗೊಂಡಂತೆ 2 ಬಾರಿ ರಾಷ್ಟ್ರ ಮಟ್ಟದ ಶಿಬಿರದಲ್ಲಿ ಕುವೆಂಪು ವಿ.ವಿ ಪ್ರತಿನಿಧಿಸಿದ್ದು , ರಾಜ್ಯಮಟ್ಟದ  ಯುವಜನೋತ್ಸವದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಸಂಗತಿ . ಆಂಗ್ಲ ಸಾಹಿತ್ಯ ಉಪನ್ಯಾಸಕಿಯಾಗುವ ಬಯಕೆಯೊಂದಿಗೆ ಪ್ರಸ್ತುತ ಕುವೆಂಪು ವಿ.ವಿ ಯ ಆಂಗ್ಲ ಸಾಹಿತ್ಯದಲ್ಲಿ ಅಂತಿಮ ವರ್ಷ ಓದುತ್ತಿದ್ದೇನೆ.

ಪ್ರಶ್ನೆ .ನಿಮ್ಮ ಬಾಲ್ಯದ ಸವಿ ನೆನಪುಗಳು.?
ಬಾಲ್ಯ ಅದು ನೆನಪುಗಳ ಬುತ್ತಿ ,  ಎಣಿಸಲಾಗದ ನಕ್ಷತ್ರಗಳ ಹಾಗೆ , ಆದರೂ ಇಂದಿನ ನನ್ನೆಲ್ಲ ಸಾಧನೆಗಳಿಗೆ ಪೂರಕವಾಗಿದ್ದೆ ನನ್ನ ಬಾಲ್ಯ . ಓದಿನಲ್ಲಿ ಮುಂದಿರುತ್ತಿದ್ದ ಕಾರಣ ಎಲ್ಲ ಶಿಕ್ಷಕರಿಗೂ ಅಚ್ಚುಮೆಚ್ಚು , ಮಾತನಾಡುವುದು , ಅಭಿನಯಿಸುವುದು ಆಗಿನಿಂದಲೆ‌ ಬಂದ ಕಲೆಗಳು . 1ನೇ ತರಗತಿ ಇಂದ ಆರಂಭವಾದ ಚರ್ಚಾಸ್ಪರ್ಧೆ , ಭಾಷಣ , ಏಕಪಾತ್ರಾಭಿನಯ ರಾಜ್ಯಮಟ್ಟವನ್ನ ಪ್ರತಿನಿಧಿಸುವ ವರೆಗೆ ಪೋಷಿಸಿದೆ .  ನಟನೆಯಲ್ಲಿ ಹುಚ್ಚು  , ಮಾತುಗಾರಿಕೆಯಲ್ಲಿ ಕಿಚ್ಚು ಮೂಡಿಸಿದ್ದೆ ಬಾಲ್ಯ .

ಪ್ರಶ್ನೆ: ತಾವು ನಿರೂಪಕಿಯಾಗಿ ಪಾದಾರ್ಪಣೆಯಾಗಿದ್ದು ಮತ್ತು ನಿರೂಪಣೆಯ ಒಲವು ಬಂದಿದ್ದು ಹೇಗೆ.?
ಈಗಾಗಲೆ ಹೇಳಿದ ಹಾಗೆ ಭಾಷಣ , ಚರ್ಚಾಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ನನಗೆ  , ಆ ಕಲೆ ನನಗರಿವಿಲ್ಲದಂತೆ ನಿರೂಪಣಾ  ಕ್ಚೇತ್ರಕ್ಕೂ ನನ್ನನ್ನು ತಂದಿತು . ಶಾಲಾ ಕಾಲೇಜುಗಳಲ್ಲಿ ಎಲ್ಲಾ ಕಾರ್ಯಕ್ರಮ ನಿರೂಪಣೆ ಮಾಡಿದ್ದ ನನಗೆ ಬ್ರೇಕ್ ಕೊಟ್ಟಿದ್ದು  ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿರುವಾಗ  ರಾ.ಸೇ.ಯೋ ಕಾರ್ಯಕ್ರಮದ ನಿರೂಪಣೆ . ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯಾತಿಗಣ್ಯರೆಲ್ಲ ಧ್ವನಿ , ಭಾಷೆಯ ಮೇಲಿನ ಹಿಡಿತ , ನಿರೂಪಣಾ ಶೈಲಿ ಮೆಚ್ಚಿ ನೀನು ಮಾಧ್ಯಮ ಕ್ಷೇತ್ರದಲ್ಲಿ ಸಾಗು ಭವಿಷ್ಯವಿದೆ ಎಂದು ನುಡಿದಿದ್ದರು , ಹಾಗೂ ನನ್ನ contact number ಪಡೆದು ಅವರ ಕಾರ್ಯಗಳನ್ನು ನಿರೂಪಿಸಲು ಅವಕಾಶ ನೀಡಿದರು , ಅಲ್ಲಿಂದ ನನ್ನ ನಿರೂಪಣಾ ಯಾನ ಪ್ರಾರಂಭ , ಒಂದು ಕಾರ್ಯಕ್ರಮದಿಂದ ಸಾವಿರಾರು ಜನರ ಮೆಚ್ಚುಗೆ , ಹಲವರು ಬಂದು ನಂಬರ್ ಪಡೆದು ಅವರ ಕಾರ್ಯಕ್ರಮಗಳಿಗೂ ಆಹ್ವಾನ ನೀಡಲು ಪ್ರಾರಂಭಿಸಿದರು . ಈ ವೇಳೆ ನನ್ನ ಭಾಷಾ ಸಾಮಾರ್ಥ್ಯ , ನಿರೂಪಣಾ ಶೈಲಿಯನ್ನ ಪಕ್ವಗೊಳಿಸಿಕೊಳ್ಳಲು ಸಹಾಯ ಮಾಡಿದ್ದು ಡಾ. ಮೋಹನ್ ಚಂದ್ರಗುತ್ತಿ ಸರ್ ಹಾಗೂ ರಾ.ಸೇ.ಯೋ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ಗಿರಿಧರ್ ಸರ್ , ಈ ಇಬ್ಬರ ಸಹಾಯ ಪ್ರೋತ್ಸಾಹ ನನ್ನ ಹಂತ ಹಂತವಾಗಿ ಈ ಕ್ಷೇತ್ರದಲ್ಲಿ ಗಟ್ಟಿಗೊಳಿಸಿದೆ ‌ .


ಪ್ರಶ್ನೆ:‌ನಿರೂಪಣಾ ಕ್ಷೇತ್ರದ ನಿಮ್ಮ ಸಾಧನೆಗೆ ಪ್ರಭಾವಿಸಿದವರು ಯಾರು.?
ನಿರೂಪಣಾ ಕ್ಷೇತ್ರದಲ್ಲಿ ನನಗೆ ಪ್ರಭಾವಿಸಿದ್ದು ಇಬ್ಬರು . ಒಂದು ನನ್ನ ಧ್ವನಿಯನ್ನ ಇಷ್ಟಪಡುವ ನಿರೂಪಣಾ ಶೈಲಿ ಮೆಚ್ಚುವ ಜನರು , ನನ್ನ ಪ್ರೋತ್ಸಾಹಿಸುವ ಎಲ್ಲ ಮನಸ್ಸುಗಳು ಇನ್ನೊಂದು ನನ್ನ ಅನಿವಾರ್ಯತೆಗಳು. ಪ್ರತಿಬಾರಿ ಕಾರ್ಯಕ್ರಮ ನಿರೂಪಿಸಿದಾಗಲೂ ಸಾವಿರಾರು  ಮೆಚ್ಚುಗೆಗಳು , ಪ್ರಶಂಸೆಗಳು , ಹೊಸ ಅವಕಾಶಗಳು ಬರುತ್ತಿದ್ದವು , ನನ್ನ ಧ್ವನಿಯನ್ನು ಮೆಚ್ಚಿದ , ಭಾಷಾ ಸಾಮಾರ್ಥ್ಯವನ್ನು ಮೆಚ್ಚಿದ ಆ ಎಲ್ಲ ಮನಸ್ಸುಗಳು ಈ ಕ್ಷೇತ್ರಕ್ಕೆ ನನ್ನ ಪ್ರಭಾವಿಸಿದವು .
ಇನ್ನೊಂದು ನಾನು ಕಾಲೇಜು ದಿನಗಳಲ್ಲೆ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ   hostel ನಲ್ಲಿ ಇದ್ದು ಓದುತ್ತಿದ್ದ ನನಗೆ ಸಾಕಷ್ಟು ಅವಶ್ಯಕತೆಗಳನ್ನ ಪೂರೈಸಿಕೊಳ್ಳಲ್ಲು ಆಧಾರ ಸ್ಥಂಭವಾಗಿದ್ದೆ ನಿರೂಪಣೆ . earn and learn ತರ ಎನ್ನಬಹುದು.

ಪ್ರಶ್ನೆ: ನಿಮ್ಮಿಂದ ಯುವ ಶಕ್ತಿಗಳಿಗೆ ಏನಾದರೂ ಕಿವಿ ಮಾತು ನಿರೂಪಣಾ ಕ್ಷೇತ್ರದ ಬಗ್ಗೆ.?
ಇತ್ತೀಚಿನ ಯುವ ಜನರಲ್ಲಿ ನಿರೂಪಣಾ ಕ್ಷೇತ್ರ ಕನಸಿನ ಕ್ಷೇತ್ರವಾಗಿದೆ , ಸಾಕಷ್ಟು ಯುವ ಮನಸ್ಸುಗಳು ನಿರೂಪಣಾ ಕ್ಷೇತ್ರದತ್ತ ಮನಸ್ಸು ಮಾಡುತ್ತಿರುವುದು ನಾವು ನೋಡಬಹುದು . ಅದು ಅವರ ವೈಯಕ್ತಿಕ ಸ್ವಾತಂತ್ರ್ಯ , ಆದರೆ ಕೆಲವೊಂದು ಯುವ ಮನಸ್ಸುಗಳಲ್ಲಿ ನಿರೂಪಣೆಗೆ ಭಾಷಾ ಕೌಶಲ್ಯಕ್ಕಿಂತ  ಸೌಂದರ್ಯವೇ ಅಳತೆಗೋಲು ಎಂಬ ಭಾವನೆ ಮೂಡಿದೆ . ನಾನು ಸುಂದರವಾಗಿದ್ದೇನೆ ಹಾಗಾಗಿ ನಾನು ನಿರೂಪಕಿಯಾಗಬೇಕೆಂದಿದ್ದೇನೆ ಎಂಬ ಮಾತುಗಳನ್ನು ನಾನು ಸ್ವತಃ ಕೇಳಿದ್ದೇನೆ ‌‌. ಈ ಮನಸ್ಥಿತಿ ನಿರ್ಮಿಸಿದ್ದು ಕೂಡ ನಮ್ಮ ಮಾಧ್ಯಮ ವ್ಯವಸ್ಥೆ . ಕಾರ್ಯಕ್ರಮದ ಜನಪ್ರಿಯತೆಗಾಗಿ ಪ್ರಖ್ಯಾತಿ /ಕುಖ್ಯಾತಿ ಪಡೆದ ಸೆಲೆಬ್ರಿಟಿಗಳನ್ನ ಕರೆಸಿ ಕಾಲೆಳೆದುಕೊಂಡು ನಗುವುದು / ನಗಿಸುವುದೆ ನಿರೂಪಣೆ ಎಂಬ ಭಾವನೆಯನ್ನ ಮೂಡಿಸಿವೆ . ಇಂದಿನ ಯುವಸಮೂಹ ಈ ಎಲ್ಲ ಭ್ರಾಂತಿಗಳಿಂದ ಹೊರಬರಬೇಕು . ನಿರೂಪಣೆಗೆ ನಿಮ್ಮ ಭಾಷಾ ಸಾಮಾರ್ಥ್ಯ , ಸಾಹಿತ್ಯಿಕ ಜ್ಞಾನ , ಪದಗಳ ಬಳಕೆಯ ವಿವೇಚನೆ , ಮಾತಿನಲ್ಲಿ ಘನತೆ , ಸಂಭೋದಿಸುವಾಗ ವಿವೇಕ, ಎಲ್ಲರನ್ನು ಆಕರ್ಷಿಸುವ ಭಾಷೆಯ ಮೇಲಿನ ಹಿಡಿತ ಇವನ್ನ ಹೊರತುಪಡಿಸಿ ನಿಮ್ಮ ಸೌಂದರ್ಯ , ಬಣ್ಣ , ಎತ್ತರ , ಜನಪ್ರಿಯತೆ , ಇದ್ಯಾವುದು ಮುಖ್ಯ ಅಲ್ಲ ಎಂಬುವುದು ನನ್ನ ಅಭಿಪ್ರಾಯ ‌. ಸಾಕಷ್ಟು ವಿಚಾರದಲ್ಲಿ ತೊಡಗಿಸಿಕೊಳ್ಳಿ , ಓದುವುದನ್ನ ಅಭ್ಯಸಿಸಿ . ಹೊಸ ಹೊಸ ಪದಪುಂಜಗಳು ನಿಮ್ಮ ಬತ್ತಳಕೆ ಸೇರುತ್ತವೆ . ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ , ಪದಗಳ ಬಳಕೆಯಲ್ಲಿ ವಿವೇಚನೆ ಇರಲಿ . ಖಂಡಿತ ಉತ್ತಮ ನಿರೂಪಕಿಯಾಗಬಹುದು ‌.

ಪಶ್ನೆ :  ತಮ್ಮ ಮುಂದಿನ ಭವಿಷ್ಯದ ಕುರಿತು ಒಂದಿಷ್ಟು ಹಂಚಿಕೊಳ್ಳ ಬಹುದಾ.?
ನನ್ನ ಮುಂದಿನ ಭವಿಷ್ಯ ಆಂಗ್ಲ ಸಾಹಿತ್ಯ ಉಪನ್ಯಾಸಕಿಯಾಗುವುದು ‌. ಕೊಠಾರಿಯವರು ಹೇಳುವ ಹಾಗೆ ಈ ದೇಶದ ಭವಿಷ್ಯ 4 ಗೋಡೆಗಳಲ್ಲಿ ನಿರ್ಮಾಣವಾಗುತ್ತದೆ ‌. ಈ ದೇಶದ ಭವಿಷ್ಯವನ್ನು ಭದ್ರ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವು , ಸಾಂಸ್ಕೃತಿಕ ನೆಲೆಗಟ್ಟುಗಳನ್ನ ಪರಿಚಯಿಸುವ ಆಸಕ್ತಿ ಇದೆ ‌. ಇದರೊಟ್ಟಿಗೆ ನನ್ನ ನೆಚ್ಚಿನ ನಿರೂಪಣಾ ಕ್ಷೇತ್ರದಲ್ಲೂ ಸಹ ಸಾಕಷ್ಟು ಎತ್ತರಕ್ಕೆ ಬೆಳೆಯುವ ಆಸೆ ಇದೆ ‌. ಇದುವರೆಗೂ ಮಾಡಿರದ ಕಾರ್ಯಗಳ ನಿರೂಪಣೆಗೆ ನನ್ನ ಸಿದ್ದಪಡಿಸಿಕೊಳ್ಳುವ ಬಯಕೆ ಇದೆ ‌. ಇದಕ್ಕೆ ಇಂಬು ನೀಡುವಂತೆ All India radio ಆಕಾಶವಾಣಿ ಭದ್ರಾವತಿಯಲ್ಲಿ  ಪ್ರತಿ ವಾರವೂ ಕಾರ್ಯಕ್ರಮ ನೀಡುತ್ತಿರುತ್ತೇನೆ ‌ , ಅಲ್ಲೂ ಸಹ ವಿಭಿನ್ನ ಆಯಾಮಗಳಿಗೆ ನನ್ನ ತೆರೆದುಕೊಳ್ಳುವ , ಆ ಮೂಲಕ ಒಂದಷ್ಟನ್ನ ಕಲಿತು ,  ಸಾಕಷ್ಟು ವಿಚಾರಗಳನ್ನು ಧ್ವನಿಯ ಮೂಲಕ ಹಂಚಿಕೊಳ್ಳುವ ಆಸೆ ಇದೆ .


ಪ್ರಶ್ನೆ:  ಇಲ್ಲಿಯವರೆಗೆ ಯಾವ ಯಾವ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನ ಯಶಸ್ವಿಗೋಳಿಸಿದ್ದಿರಾ.?
ಇಲ್ಲಿಯವರೆಗೆ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಿಸಿದ ತೃಪ್ತಿ ಇದೆ ‌. ರಾಜ್ಯಮಟ್ಟದ ಜಾನಪದ ಜಾತ್ರೆ , ಜಿಲ್ಲಾ ಮಟ್ಟದ ಜಾನಪದ ಜಾತ್ರೆ , ಜನಪದ ಉತ್ಸವ , ಸಹ್ಯಾದ್ರಿ ಉತ್ಸವ , ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ , ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಕವಿ ಕಾವ್ಯ ಸಮ್ಮೇಳನ , ಕಿರು ಚಲನ ಚಿತ್ರೋತ್ಸವ , ಕೃಷಿಮೇಳ ಉದ್ಘಾಟನಾ ಕಾರ್ಯಕ್ರಮ , ಪ್ರಧಾನ ಮಂತ್ರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ , ವಿಶ್ವವಿದ್ಯಾಲಯ ಮಟ್ಟದ ಕಾರ್ಯಗಳು , ಪ್ರಶಸ್ತಿ ಪ್ರಧಾನ ಸಮರಂಭಗಳು , Celebrity shows ,  50ಕ್ಕೂ ಹೆಚ್ಚು corporate ಕಾರ್ಯಕ್ರಮಗಳು , ಸರ್ಕಾರಿ ಕಾರ್ಯಕ್ರಮಗಳ ನಿರೂಪಣೆಯ ಅನುಭವವಿದೆ .‌

ಪ್ರಶ್ನೆ : ನೀವು  ರಂಗಭೂಮಿಯ ಕಲಾವಿದೆಯೂ ಹೌದು! ರಂಗಭೂಮಿಯ ಕ್ಷೇತ್ರದಲ್ಲಿ ಮಿಂಚಿದ್ದು ಹೇಗೆ.?
ರಂಗಭೂಮಿ‌ ನನ್ನ ಮೊದಲ ಆದ್ಯತೆ . ಬಾಲ್ಯದಲ್ಲಿ ಅಭಿನಯಿಸುತ್ತಿದ್ದ ಏಕಪಾತ್ರಾಭಿನಯವೇ ರಂಗಭೂಮಿಯತ್ತ ನನ್ನ ಸೆಳೆದಿದ್ದು . ಸಹ್ಯಾದ್ರಿ ಕಾಲೇಜು ನನ್ನ ಕನಸ್ಸುಗಳಿಗೆ ಆಶ್ರಯ ನೀಡಿ , ರಂಗಭೂಮಿಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು . 2015 ರಲ್ಲಿ ಬೆಳಕು ಕಲಾ‌ ಸಂಸ್ಥೆಯ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದೆ .‌ಮೊದಲು ಬಣ್ಣ ಹಚ್ಚಿದ ನಾಟಕ ಚಂದ್ರ ಶೇಖರ್ ಕಂಬಾರರ " ಹುಲಿಯ ನೆರಳು"



ಪ್ರಶ್ನೆ :  ಇದುವರೆಗೂ ಯಾವೆಲ್ಲ ನಾಟಕಗಳಲ್ಲಿ ಅಭಿನಯಿಸಿದ್ದೀರಾ ? ರಂಗಭೂಮಿಯ ಬಗ್ಗೆ ನಿಮ್ಮ ಅನಿಸಿಕೆ?
ಇದುವರೆಗೂ 5 ವರ್ಷಗಳಲ್ಲಿ ಹುಲಿಯ ನೆರಳು , ಸಾಕ್ರೆಟಿಸ್ , ಬುನಾದಿ , ಕರ್ಣಭಾರ , ಮಹಾ ಪರಿವರ್ತನೆ , ಹೂ , ಭಾರತಾಂಬೆ , ದೇವರ ಹೆಣ , ಜೊತೆಗಿರುವ ಚಂದಿರ  ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ .
ರಂಗಭೂಮಿ ಎಲ್ಲರನ್ನು ಒಳಗೊಳ್ಳುವ ಒಂದು ಪ್ರಕ್ರಿಯೆ , ಯಾವುದೇ ಅಸಮಾನತೆ ಇಲ್ಲದೆ , ಬೇಧ ಭಾವ ಇಲ್ಲದೆ ಎಲ್ಲರನ್ನ ತನ್ನತ್ತ ಕೈ ಬೀಸಿ ಕರೆವ ಒಂದು ಸಾಂಸ್ಕೃತಿಕ ಸಂಸ್ಥೆ . ಇಲ್ಲಿ ನಿಮ್ಮ ಕಲೆಯನ್ನ ಹೊರತುಪಡಿಸಿ ಇನ್ನಿತರೆ ಯಾವುದೇ ಮಾನದಂಡದಿಂದ ನಮ್ಮನ್ನ ಅಳೆಯಲಾಗುವುದಿಲ್ಲ , ಕಲೆಯೇ ರಂಗಭೂಮಿಯ ಜೀವಾಳ . ಜೀವನದ ಮೌಲ್ಯವನ್ನು ತಿಳಿಸುವಲ್ಲಿ , ಸಾಮರಸ್ಯದ ಬದುಕನ್ನು ಕಟ್ಟಿಕೊಡುವಲ್ಲಿ ರಂಗಭೂಮಿಯ ಪಾತ್ರ ಸಾಕಷ್ಟಿದೆ . ಯುವಜನತೆ ಸಿನಿಮಾಗಳಿಗೆ ಆಕರ್ಷಿತರಾಗುವಷ್ಟೆ ಪ್ರಮಾಣ ರಂಗಭೂಮಿಯ ಕಡೆಗೂ ಮುಖಮಾಡಬೇಕಾಗಿದೆ .


ಪ್ರಶ್ನೆ : ನಿಮ್ಮ ಸಾಧನೆಗೆ ಪ್ರಶಸ್ತಿಗಳೇನಾದರು ಬಂದಿದೆಯೇ.?
ಹೌದು 3 ಬಾರಿ ರಾಜ್ಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪ್ರಥಮ,2ಬಾರಿ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ , ಅತ್ಯುತ್ತಮ ಧ್ವನಿ ಪ್ರಶಸ್ತಿ, 2018 ರಲ್ಲಿ ಸಾಂಸ್ಕೃತಿಕ ಪ್ರತಿಭೆ ಪ್ರಶಸ್ತಿ, 2020 ರಲ್ಲಿ ಬೀದರ್ ನಲ್ಲಿ ನಡೆದ ಕರ್ನಾಟಕ ಅಖಿಲ ಕವಿ ಕಾವ್ಯ ಸಮ್ಮೇಳನದಲ್ಲಿ ಕಲಾ ರತ್ನ ಚೂಡಾಮಣಿ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

ಪ್ರಶ್ನೆ : ರಂಗಭೂಮಿ ಇಂದ‌ ಸಿನಿಮಾ , ಕಿರುತೆರೆ ಪ್ರವೇಶಿಸುವ ಬಯಕೆ ಇದೆಯೆ ?
ಅವಕಾಶ ಸಿಕ್ಕರೆ ಖಂಡಿತ ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಅಭಿನಯಿಸುವ ಬಯಕೆ ಇದೆ . ಪ್ರತಿ ನಾಟಕದಲ್ಲೂ ಸಾಕಷ್ಟು ವಿಷಯಗಳನ್ನು ‌ಕಲೆಯುತ್ತಿದ್ದೇನೆ , ಅಭಿನಯದಲ್ಲಿ ನನ್ನ ನಾ ಗಟ್ಟಿಗೊಳಿಸಿಕೊಳ್ಳುತ್ತಿದ್ದೇನೆ ‌. ಲಾಕ್ ಡೌನ್ ಮೊದಲು ಬೀರ್ ಬಲ್ ಖ್ಯಾತಿಯ ಶ್ರೀನಿ ಅವರ ಚಿತ್ರವೊಂದಕ್ಕೆ  ಆಡಿಶನ್ ನಡೆಸಲಾಗಿತ್ತು , ಆಡಿಶನ್ ನಲ್ಲಿ ಆಯ್ಕೆ ಕೂಡ ಆಗಿದ್ದೀನಿ ‌. ಲಾಕ್ ಡೌನ್ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ .

ಪ್ರಶ್ನೆ: ನಿಮ್ಮ ಎಲೆಮರೆಯ ಸಾಧನೆಗೆ ಪ್ರಶ್ನೆ ಏನಾದರೂ ಬಂದಿದೆಯೇ.?
ಪ್ರಶ್ನೆ ಯಾವುದು ಇಲ್ಲ , ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನ ಪಡೆದುಕೊಂಡಿದ್ದೇನೆ ‌. ಈ ಕ್ಷೇತ್ರದಲ್ಲಿ ಸ್ವಲ್ಪ ತಾಳ್ಮೆಯ ಜೊತೆಗೆ intelligence ಕೂಡ ಮುಖ್ಯ , ನಮ್ಮಂತ ಎಲೆ ಮರೆಯ ಸಾಧಕರನ್ನ ಮುನ್ನಲೆಗೆ ತರುವ ನಿಮ್ಮ ಪ್ರಯತ್ನ ಅಭಿನಂದನಾರ್ಹ , ಈ ಪ್ರಯತ್ನ ನಿರಂತರವಾಗಿರಲಿ ಸಾಕಷ್ಟು ಸಾಧಕರು ನಿಮ್ಮ ಬೆರಳುಗಳಿಂದ ಮುನ್ನಲೆಯಲ್ಲಿ ಅರಳಲಿ.

ಸಂದರ್ಶಕರು : 
ನಿರಂಜನ್ ಎ. ಸಿ ಬೇಲೂರು
ಮುಖ್ಯಸ್ಥರು 
ಕವಿ ಕಾವ್ಯ ಸುಧೆ 
( Niranjan AC Belur creation's ) 
9844411838

Post a Comment

0 Comments