ಎಸ್ ಎಂ ಎಸ್ , ಶಶಿ ಮಿತ್ರ ಸಾಮ್ರಾಟ

ಇನ್ನೊಬ್ಬರ ಪ್ರತಿಭೆಯನ್ನು ತುಳಿಯುವುದರ ಮೂಲಕ ನಿಮ್ಮ ಪ್ರತಿಭೆ ತೋರಿಸಬೇಡಿ: ಎಸ್.ಎಂ.ಎಸ್ 



( ಕವಿ ಕಾವ್ಯ ಸುಧೆ ನಡೆಸಿದ ಹೊಸ ತರಹದ ಹುಡುಕಾಟದಲ್ಲಿ ಪ್ರತಿಭೆಗಳ ಅನಾವರಣದ ಕಾರ್ಯಕ್ರಮದ   ಸಂದರ್ಶನದಲ್ಲಿ ನಿರಂಜನ್ ಎ ಸಿ ಬೇಲೂರು ಜೊತೆ  ಯುವ ಉದಯೋನ್ಮುಖ ಕಲಾವಿದ ಶಶಿ ಮಿತ್ರ ಸಾಮ್ರಾಟ್. )


ಎಸ್.ಎಂ.ಎಸ್ ಶಶಿ ಮಿತ್ರ ಸಾಮ್ರಾಟ್ ಎಂದೇ ಪ್ರಖ್ಯಾತಿಗೊಂಡಿರುವ ಇವರು ಮೂಲತಃ ಬೆಂಗಳೂರಿನವರು, ತಂದೆ ಗೋಪಿನಾಥ್ (ಹಣ್ಣಿನ ವ್ಯಾಪಾರಿ) ಮತ್ತು ತಾಯಿ ಕಮಲಾದೇವಿ (ಗೃಹಿಣಿ) ದಂಪತಿಗಳ ಪುತ್ರನಾಗಿ ಮಾರ್ಚ್ ೧೯ರಂದು ಜನಿಸಿದರು.
ತನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನ್ಯಾಷನಲ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮುಗಿಸಿ. ಹಾಗೆಯೇ  ಪದವಿ ಪೂರ್ವ ಶಿಕ್ಷಣವನ್ನು ವಿಜಯ ಜೂನಿಯರ್ ಕಾಲೇಜಿನಲ್ಲಿ ಮತ್ತು ವಿಜಯವಿಠಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರನಾಗಿದ್ದಾರೆ.

ಪ್ರಶ್ನೆ :- ಶಶಿಮಿತ್ರ ಕಿರುತೆರೆಯಿಂದ ಹಿರಿತೆರೆಗೆ ಪ್ರವೇಶ ಹೇಗೆ?

ಮೊದಲನೇ ಬಾರಿಗೆ ಕಿರುತೆರೆಯ ಪರದೆ ಮೇಲೆ ಕಾಣಿಸಿಕೊಂಡಿದ್ದು "ಮಜಾ ಟಾಕೀಸ್" ಮುಖಾಂತರ, ತದನಂತರ ನನ್ನ ಕಿರುತೆರೆಯ ಧಾರವಾಹಿ ಮುದ್ದುಲಕ್ಷ್ಮಿ 2018ರಲ್ಲಿ ಎಸ್.ಎಂ.ಎಸ್ ಅನ್ನೋ ಪಾತ್ರ ಬಹಳ ಯಶಸ್ವಿ ಕಂಡಿತು. ಹಾಗೆಯೇ ನಾನು ಹಿರಿತೆರೆಯಲ್ಲಿ "ಚೂರಿಕಟ್ಟೆ" ಸಿನಿಮಾ ಮುಖಾಂತರ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲು ಅವಕಾಶಗಿಟ್ಟಿತು.


ಪ್ರಶ್ನೆ :- ನೀವು ಓದಿದ್ದು ಇಂಜಿನಿಯರ್ ಆದರೂ ಕಲೆಗಳಲ್ಲಿ ಆಸಕ್ತಿ ಮೂಡಿ ಬಂದಿದ್ದು ಹೇಗೆ?

- ಚಿಕ್ಕವಯಸ್ಸಿನಲ್ಲಿಯೇ ಕಲೆಯ ಬಗೆಗೆ ಆಸಕ್ತಿ ಬೆಳೆಸಿಕೊಂಡು, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದವನು ಮತ್ತು ಮಿಮಿಕ್ರಿ ಕಲೆಯ ಮೂಲಕ ಎಲ್ಲರನ್ನೂ ರಂಜಿಸುತ್ತಾ,ನನ್ನ ಶಾಲಾ-ದಿನಗಳಲ್ಲೇ ನಟ-ನಿರ್ದೇಶಕ ಟಿ.ಎಸ್ ನಾಗಾಭರಣರ 'ಬೆನಕ' ನಾಟಕ ಸಂಘದಲ್ಲಿ  ಪ್ರದರ್ಶಿಸಿದ್ದೆ.


ಪ್ರಶ್ನೆ :- ಕಿರುಚಿತ್ರಗಳ ಸಾಮ್ರಾಟ್ ಶಶಿ ಎಂದೇ ಖ್ಯಾತಿ ಪಡೆದಿದ್ದೀರಿ, ಕಿರು ಚಿತ್ರಗಳು ಯಾವುವು ಮತ್ತು ಪ್ರಶಸ್ತಿಗೆ ಆಯ್ಕೆಯಾದ ಕಿರು ಚಿತ್ರಗಳು ಯಾವುವು?

  - ನಾನು ಇಲ್ಲಿಯವರೆಗೂ ಒಬ್ಬ ಅತ್ಯುತ್ತಮ ಕಲಾವಿದನಾಗಿ, ನಿರ್ದೇಶಕನಾಗಿ, ನನ್ನನ್ನು ನಾನು ಗುರುತಿಸಿಕೊಂಡಿದ್ದು ನನ್ನ ಕಿರುಚಿತ್ರಗಳ ಮೂಲಕ, ಇದುವರೆಗೂ ನಾನು 20 ರಿಂದ 25 ಕಿರುಚಿತ್ರಗಳನ್ನು ಮಾಡಿದ್ದೇನೆ. ಅದರಲ್ಲಿ ನನಗೆ ಹೆಸರು ತಂದುಕೊಟ್ಟ ಚಿತ್ರಗಳೆಂದರೆ "ಕರ್ಮ" ಅನ್ನೋ ಕಿರುಚಿತ್ರ ಅದು 2017ರ 'ಕ್ಯಾಟರ್ ಪಿಲ್ಲರ್' ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಾನು ನಿರ್ದೇಶನ ಮಾಡಿರುವ ಕಿರುಚಿತ್ರ ಆಯ್ಕೆಯಾಗಿದ್ದು ಹಾಗೆಯೇ 2015 ರಲ್ಲಿ 'ಆಕ್ಸಿಟೆಕ್ ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟಿವಲ್' ನಲ್ಲಿ ಸೋಶಿಯಲ್ ಮೀಡಿಯಾ ಡಾಕ್ಯುಮೆಂಟರಿ ಎಂಬ "ಸಾಕ್ಷ್ಯ"ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದ ಪ್ರಶಸ್ತಿ ಪಡೆದುಕೊಂಡಿದ್ದೇನೆ. ಮತ್ತು "ವಧಾ"ಎಂಬ ಕಿರುಚಿತ್ರವು 'ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ' ಆಯ್ಕೆಯಾಗಿತ್ತು.




ಪ್ರಶ್ನೆ :- ಸಾಕಷ್ಟು ಯುವಕರು ಚಿತ್ರರಂಗದ ಕನಸನ್ನು ಕಂಡಿರುತ್ತಾರೆ ಯುವಕರಿಗೆ ನೀವು ಏನು ಹೇಳಲು ಬಯಸುತ್ತೀರಾ?

     -ನಿಮ್ಮ ಉತ್ಸಾಹವನ್ನು ಅನುಸರಿಸಿ, ಕಷ್ಟಕರವಾದ ಕೆಲಸವನ್ನು ಸುಲಭವನ್ನಾಗಿಸಿ ಮಾಡಿ, ಭಾವೋದ್ರಿಕ್ತರಾಗಿರಿ, ನೀವು ಕಂಡ ಕನಸನ್ನು ಛಲ ಬಿಡದೆ ಮಾಡಿ, ಇನ್ನೊಬ್ಬರ ಪ್ರತಿಭೆಯನ್ನು ತುಡಿಯುವುದರ ಮೂಲಕ ನಿಮ್ಮ ಪ್ರತಿಭೆಯನ್ನು ತೋರಿಸಬೇಡಿ. ನಿಮ್ಮತನದಿಂದ ನೀವು ಗೆಲ್ಲಿ,ಆಗ ಮಾತ್ರ ಸಾಧಿಸಲು ಸಾಧ್ಯ ಹಾಗೆಯೇ ದೇವರು ನಿಮಗೆ ಯಶಸ್ಸನ್ನು ನೀಡುತ್ತಾನೆ.


ಪ್ರಶ್ನೆ :- ನಿಮ್ಮ ಇಷ್ಟೆಲ್ಲಾ ಸಾಧನೆಗೆ ಪ್ರೇರಣೆ ಯಾರು?

ನನ್ನೆಲ್ಲಾ ಇಷ್ಟು ಸಾಧನೆಗೆ ಪ್ರೇರಣೆಯಾಗಿರೋದು ನಮ್ಮ ಬಾಸ್ 'ಶಂಕರ್ ನಾಗ್ ಸರ್' ಎಂದರೆ ತಪ್ಪಾಗಲಾರದು. ನಾನು ಅಪ್ಪಟ ಕನ್ನಡಾಭಿಮಾನಿ, ಶಂಕರ್ ನಾಗ್ ಸರ್ ಅವರ ಭಕ್ತ. ಅವರ ವ್ಯಕ್ತಿತ್ವ ಮತ್ತು ಸಿನಿಮಾಗಳು ನನಗೆ ಬಹಳ ಪ್ರೇರಣೆ ನೀಡಿತು. ಅವುಗಳಲ್ಲಿ ಮಾಲ್ಗುಡಿ ಡೇಸ್, ಮಿಂಚಿನ ಓಟ ಈ ತರಹದ ಸಿನಿಮಾಗಳು ನನಗೆ ಬಹಳ ಸ್ಫೂರ್ತಿದಾಯಕ ವಾಗಿವೆ. ನನ್ನ ಈ ಎಲ್ಲಾ ಸಾಧನೆಗಳಿಗೂ ಹೊಸ ತಿರುವು ಕೊಟ್ಟಿದೆ.

ಪ್ರಶ್ನೆ :- ತಾವು ಕನ್ನಡ ಚಿತ್ರರಂಗ ಅಲ್ಲದೆ, ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಿದ್ದೀರಿ. ಅದರ ಅನುಭವ ಹೇಗಿತ್ತು?

   -ತಮಿಳಿನ ಒಂದು ಯೂಟ್ಯೂಬ್ ಯೋಜನೆಗೆ ನಟನೆ ಹಾಗೂ ನಿರ್ದೇಶನ ಮಾಡಿದ್ದೇನೆ. ಹಾಗೆಯೇ ತಮಿಳು ಭಾಷೆಯ ಒಂದು ಕಿರುಚಿತ್ರದಲ್ಲಿ ನಟನೆ ಮಾಡಿದ್ದೇನೆ. ಹಿಂದಿಯಲ್ಲಿ "ಶಕೀಲಾ" ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ.ನಮ್ಮದಲ್ಲದ ಭಾಷೆಯಲ್ಲಿ ನಟಿಸುವುದು, ನಿರ್ದೇಶನ ಮಾಡುವುದೆಂದರೆ ಅದು ಕಬ್ಬಿಣದ ಕಡಲೆಯಂತೆ ಆ ಭಾಷೆಯನ್ನು ಕಲಿತು, ಅರ್ಥೈಸಿಕೊಳ್ಳುವವರೆಗು ಸ್ವಲ್ಪ ಕಷ್ಟವೆನಿಸುತ್ತದೆ.

ಪ್ರಶ್ನೆ :- ತಾವು ಸಮಾಜಸೇವೆಗಳಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೀರಿ? ನಿಮ್ಮ ಜೊತೆಗೆ ಸಾರ್ವಜನಿಕರು ಸಹಕರಿಸುತ್ತಾರೆಯೇ?

   - ನನ್ನ ಸಮಾಜಸೇವೆಗೂ ಪ್ರೇರಣೆಯಾಗಿದ್ದು"ಶಂಕರ್ ನಾಗ್ ಸರ್" ಅವರು ಹೇಗೆ ಜನರ ಒಳಿತಿಗಾಗಿ ತಮ್ಮನ್ನು ತಾವು ಈ ಸಮಾಜಕ್ಕೆ ತೊಡಗಿಸಿಕೊಂಡಿದ್ದಾರೋ, ಹಾಗೆಯೇ ನಾನು ಕೂಡ ಒಬ್ಬ ಹೆಮ್ಮೆಯ ಪ್ರಜೆಯಾಗಬೇಕು. ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು.
        ಇತ್ತೀಚಿಗಷ್ಟೇ ಕೋವಿಡ್- 19 ಸಮಸ್ಯೆಯಿಂದ ಅದೆಷ್ಟೋ ಕುಟುಂಬಗಳು ಕೆಲಸವನ್ನು ಕಳೆದುಕೊಂಡು ಕಂಗಾಲಾಗಿದ್ದರು. ಆ ಸಮಯದಲ್ಲಿ ದಿನನಿತ್ಯದ ಜೀವನ ನಡೆಸಲು ಬೇಕಾದಂತಹ  ಸಾಮಗ್ರಿಗಳನ್ನು ರೇಷನ್ ಕಿಟ್ ಮೂಲಕ ಸಾರ್ವಜನಿಕರೊಡನೆ ಸೇರಿ ವಿತರಣೆ ಮಾಡಿದ್ದೆವು.


ಪ್ರಶ್ನೆ :- ನಿಮ್ಮ ಸಾಧನೆಗೆ ಸನ್ಮಾನ ಹಾಗೂ ಪ್ರಶಸ್ತಿಗಳೇನಾದರು ಬಂದಿದೆಯೇ?

-ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿ ಬಿಜೆ ನಿರೂಪಣೆಯಲ್ಲಿ ಎರಡನೇ ಬಹುಮಾನ ಪಡೆದು ರನ್ನರ್-ಅಪ್ ಆಗಿದ್ದೆ. ಹಾಗೆಯೇ ಕೇರಳದಲ್ಲಿ ಎನ್
ಡಿ.ಓ ಬ್ರೈಟ್ ಕಮಾಂಡೋ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ.ಇನ್ನ ಕರ್ನಾಟಕದಲ್ಲಿ ನನ್ನ ಸಿನಿಮಾ ಮತ್ತು ಧಾರವಾಹಿಗಳಿಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಘದಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದೇನೆ.

ಪ್ರಶ್ನೆ :- ನಿಮ್ಮ ಜೀವನದಲ್ಲಿ ನಡೆದಿರುವ ಅತ್ಯಂತ ಖುಷಿ ಘಟನೆ ಮತ್ತು ಕಹಿ ಘಟನೆ ಯಾವುವು?

  -ನಾನು ಮೊದಲನೇ ಬಾರಿಗೆ ಕಿರುತೆರೆಯ ಪರದೆ ಮೇಲೆ ಕಾಣಿಸಿಕೊಂಡಿದ್ದು  ಮಜಾ ಟಾಕೀಸ್ ಮುಖಾಂತರ ಹಾಗಾಗಿ 'ಮಜಾ ಟಾಕೀಸ್' ದೂರದರ್ಶನದಲ್ಲಿ ಪ್ರಸಾರವಾದ ದಿನ ನನಗೆ ಬಹಳ ಖುಷಿ ತಂದುಕೊಟ್ಟಿತು. 
     -ನನಗೆ ಶೂಟಿಂಗ್ ಇದೆ ಬನ್ನಿ ಅಂತ ಕರೆಬಂತು. ಆ ದಿನ ಬೆಳಗ್ಗೆ ಎದ್ದು ಎಲ್ಲಾ ತಯಾರಿಯೊಂದಿಗೆ ಶೂಟಿಂಗ್ ಸ್ಥಳಕ್ಕೆ ಹೋದರೆ ಅಲ್ಲಿ ಶೂಟಿಂಗ್ ಇಲ್ಲ ಅಂತ ಹೇಳಿದ್ರು, ರಾಜಕಾರಣಿಯ ರಾಜಕೀಯ ಅಧಿಕಾರದಲ್ಲಿ ಪಾಲ್ಗೊಳ್ಳಲು ಹೇಳಿದಾಗ ನನಗೆ ಬಹಳ ಬೇಸರ ಉಂಟಾಯಿತು. ಒಬ್ಬ ಕಲಾವಿದರನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ ಅಂತ ಅನಿಸಿತು.

ಮಿತ್ರ ಶಶಿ ಅವರ ತೆರೆ ಮರೆಯ ಸಮಾಜಿಕ  ಕೆಲಸಗಳು ಕಾಣಿಸದೆ ಇರಬಹುದು, ಆದರೆ ಇವರ ಕಾರ್ಯ ಅತ್ತ್ಯುತ್ತಮವಾದದ್ದು, ಶಶಿ ಅವರೇ ನಿಮ್ಮ ಮುಂದಿನ ಆಲೋಚನೆಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದು ನಮ್ಮ ಕವಿ ಕಾವ್ಯ ಸುಧೆ ತಂಡದಿಂದ ಹಾಗೂ  ಪತ್ರಿಕೆಯ ಪರವಾಗಿ ನಿಮಗೆ ಶುಭಾಶಯಗಳು ತಿಳಿಸುತ್ತ ಹಾರೈಸುತ್ತೆವೆ.

ಬರವಣಿಗೆ  : ಚೈತ್ರ ,ಎಸ್. ವಂದಗನೂರ್


Post a Comment

0 Comments