ನಿರಂತರ ಪರಿಶ್ರಮ ಮತ್ತು ಅಭ್ಯಾಸ ಸಾಧನೆಗೆ ಸುಲಭ ಮಾರ್ಗ: ಸಾಹಿತ್ಯಶ್ರೀ ಚಂದನ

(ಹಾಸನ ಜಿಲ್ಲೆಯ ಹಾಸನ  ತಾಲ್ಲೂಕಿನ ಹೆರಗು ಗ್ರಾಮದ ಉದಯೋನ್ಮುಖ ಯುವ ಬರಹಗಾರ್ತಿ ಸಾಹಿತ್ಯ ಶ್ರೀ ಚಂದನ  ಅವರ ಜೊತೆ ಕವಿ  ಕಾವ್ಯ ಸುಧೆ ನಡಸಿದ  ಸಂದರ್ಶನ.)




ನಿರಂತರ ಪರಿಶ್ರಮ ಮತ್ತು ಅಭ್ಯಾಸ ಸಾಧನೆಗೆ ಸುಲಭ ಮಾರ್ಗ: ಸಾಹಿತ್ಯಶ್ರೀ ಚಂದನ

  ಕನ್ನಡ ನಾಡಿಗೆ ಮತ್ತೋರ್ವಳು ಉದಯೋನ್ಮುಖ ಯುವ ಬರಹಗಾರ್ತಿ, ಚಿಂತಕಿ, ಕಥೆಗಾರ್ತಿ, ಕಾದಂಬರಿಗಾರ್ತಿ, ಕವಯತ್ರಿ ಸಿಗುವ ಎಲ್ಲ ಭರವಸೆಗಳು ನಮಗೆ ಸಿಕ್ಕಿವೆ. ಆ ಯುವ ಪ್ರತಿಭೆಯ ಹೆಸರು ಸಾಹಿತ್ಯಶ್ರೀ ಚಂದನ. ರಾಜ್ಯ ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಡೀ ನಾಡಿನಾದ್ಯಂತ ಸಾಹಿತ್ಯದ ಪರಿಮಳ ಬೀರಿದವರೆ ಚಂದನ.
     ಚಂದನ ಹೆಚ್.ವಿ. ಹಾಸನ ತಾಲೂಕಿನ ಹೆರಗು ಗ್ರಾಮದಲ್ಲಿ ವೆಂಕಟೇಶ್ ಮತ್ತು ಪೂರ್ಣಿಮಾ ದಂಪತಿಗಳಿಗೆ ದಿನಾಂಕ 4-6- 2000ದಲ್ಲಿ ಜನಿಸಿದರು. ಚಂದನಳಿಗೆ ಪ್ರತಿಭಾವಂತ ಸಹೋದರಿಯಿದ್ದು ಅವರ ಹೆಸರು ಗಗನ. ಚಂದನ ಈಗಾಗಲೇ 'ಚಂದನ ಮನ' ಎಂಬ ಕೃತಿಯನ್ನು ನಾಡಿಗೆ ಸಮರ್ಪಿಸಿದ್ದಾರೆ. ಚಂದನ ತಮ್ಮ ಫೇಸ್ಬುಕ್ ಮೂಲಕ 'ವಾರದ ಕಥೆ ಚಂದನ ಜೊತೆ' ಎಂಬ ಪರಿಕಲ್ಪನೆಯೊಂದಿಗೆ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಚಂದನರೊಟ್ಟಿಗೆ ಕವಿ-ಕಾವ್ಯ ಸುಧೆಯ ವತಿಯಿಂದ ನಡೆಸಿದ ಸಂದರ್ಶನದ ವರದಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

   ನಿಮ್ಮ ಬಾಲ್ಯದ ಬದುಕಿನ ಕುರಿತು ತಿಳಿಸಿ?
    ನನ್ನ ಬಾಲ್ಯವನ್ನು ನನ್ನ ಅಜ್ಜಿಯ ಮನೆಯಾದ ಹಾಸನ ತಾಲ್ಲೂಕಿನ ಸಂಕೇನಹಳ್ಳಿ ಯಲ್ಲಿ ಕಳೆದೆ. ಬಾಲ್ಯದಲ್ಲಿ ಅಜ್ಜ,ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ, ತಮ್ಮ ಎಂಬ ಸಂಬಂಧಗಳನ್ನು ಸವಿಯುವುದು ಚೆಂದ. ಪ್ರಸ್ತುತ ದಿನಮಾನಗಳಲ್ಲಿ ಈ ಸುಂದರ ಸಂಬಂಧಗಳು ಯಾಂತ್ರಿಕವಾಗಿವೆ ಎನಿಸುತ್ತಿದೆ.ಹಳ್ಳಿಯ ಬದುಕು ಸುಂದರ ಅನುಭವವನ್ನು ಕಟ್ಟಿಕೊಡುತ್ತದೆ. ಪರಿಸರ ಪ್ರಕೃತಿಯೊಂದಿಗಿನ ಒಡನಾಟ ಬಹಳ ಆರೋಗ್ಯ ಪೂರ್ಣವಾಗಿರುತ್ತದೆ.


ನಿಮ್ಮ ವಿದ್ಯಾಭ್ಯಾಸ ನಡೆದುಬಂದ ಬಗ್ಗೆ ತಿಳಿಸಿ?
    ನನ್ನ ಪ್ರಾಥಮಿಕ ಶಿಕ್ಷಣವನ್ನು ಹಾಸನದ ತಣ್ಣೀರುಹಳ್ಳದ ಪ್ರಸನ್ನ ಶಾಲೆಯಲ್ಲಿ, ನಂತರ ಹಾಸನದ ಗಂಧದ ಕೋಟೆಯ ಸರ್ಕಾರಿ ಪ್ರಧಾನ ಶಾಲೆಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ಪ್ರಸ್ತುತ ಹಾಸನದ ಗೃಹ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದೇನೆ.

     ಸಾಹಿತ್ಯದ ಕಡೆಗಿನ ತಮ್ಮ ಒಲವು ಪ್ರಾರಂಭವಾದದ್ದು ಹೇಗೆ?
     ನಾನು ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ನನ್ನ ಸಂಬಂಧಿ ಶರತ್ ಚಕ್ರವರ್ತಿಯವರೊಟ್ಟಿಗೆ ನಡೆದ ಸಂವಾದದ ಪ್ರೇರಣೆಯಿಂದ ಅವರು ಸಹ ಬರಹಗಾರರಾಗಿದ್ದ ಕಾರಣಕ್ಕಾಗಿ ನನಗೆ ಬರಹದ ಕಡೆಗೆ ಆಸಕ್ತಿ ಮೂಡುವಂತೆ ಮಾಡಿತು. ಪ್ರೌಢಶಾಲೆಯಲ್ಲಿದ್ದಾಗ ಸಂಸ್ಕೃತದ ಮೇಷ್ಟ್ರು ನನ್ನನ್ನು ಹುರಿದುಂಬಿಸಿದ ಕಾರಣಕ್ಕಾಗಿ ಅವಕಾಶಗಳನ್ನು ವಿಫುಲವಾಗಿ ಒದಗಿಸಿದ ಕಾರಣಕ್ಕಾಗಿ ನನಗೆ ಸಾಹಿತ್ಯದ ಕಡೆಗೆ ಒಲವು ಹೆಚ್ಚಿತು.


     ವಾರದ ಕಥೆ ಚಂದನ ಜೊತೆ ಎಂಬ ಪರಿಕಲ್ಪನೆ  ಹೇಗೆ ಮೂಡಿತು?
     ನನ್ನ ಅಭಿಪ್ರಾಯ ಚಿಂತನೆಗಳನ್ನು ಹೊರಹಾಕಲು ಒಂದು ಸೂಕ್ತ ವೇದಿಕೆಯ ಅವಶ್ಯಕತೆ ಇತ್ತು. ಅದಕ್ಕೆ ಸೂಕ್ತ ಅನಿಸಿದ್ದು ಅಂತರ್ಜಾಲ. ಪ್ರಸ್ತುತ ದಿನಮಾನಗಳಲ್ಲಿ ಜಗತ್ತನ್ನು ಬಹಳ ಬೇಗ ಸಂಪರ್ಕಿಸಲು ಸಾಧ್ಯವಾಗುವುದು ಅಂತರ್ಜಾಲದಿಂದ. ಫೇಸ್ಬುಕ್ನಲ್ಲಿ ವಾರದ ಕಥೆ ಚಂದನ ಜೊತೆ ಎಂಬ ಪರಿಕಲ್ಪನೆಯ ಮೂಲಕ ನನ್ನ ಚಿಂತನೆಗಳನ್ನು ಹೊರ ಹಾಕಲು ಪ್ರಯತ್ನಿಸಿ ಇಂದು ಲಕ್ಷಾಂತರ ಮಂದಿಯನ್ನು ತಲುಪಿದ್ದೇನೆ. ಇರುವಂತಹ ಸೂಕ್ತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಸಾಧಿಸಲು ಸಾಧ್ಯವಾಗುತ್ತದೆ.

     ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದೀರಿ ಅದರ ಅನುಭವ ಹೇಗಿತ್ತು?
    ಅದು ನನ್ನ ಬದುಕಿನ ಬಹುದೊಡ್ಡ ಪುಣ್ಯ. 2017 ನೇ ವರ್ಷದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸರ್ವಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಬಹಳ ದೀರ್ಘವಾಗಿತ್ತು. ಅಂತಿಮವಾಗಿ ನಾನು ಅಧ್ಯಕ್ಷೆಯಾಗಿ ಆಯ್ಕೆಯಾದೆ. ಅದು ನನ್ನನ್ನು ಸಾಹಿತ್ಯದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೇರಕವಾಯಿತು. ಆ ವೇದಿಕೆಯಲ್ಲಿ ಸಿದ್ದಲಿಂಗಯ್ಯರಂತಹ ಮೇರು ವ್ಯಕ್ತಿತ್ವ ಗಳ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ದೊರೆಯಿತು. ನನ್ನ ವಯೋಮಾನದ ಅನೇಕ ಕವಿಹೃದಯ ಗಳನ್ನು ಭೇಟಿಮಾಡುವ, ಚರ್ಚಿಸುವ, ಕಲಿಯುವ, ಕಲಿಸುವ ಅವಕಾಶ ದೊರೆಯಿತು‌.


     ಜಿಲ್ಲೆಯನ್ನು ಪ್ರತಿನಿಧಿಸಿ ದೆಹಲಿಯಲ್ಲಿ ಯುವ ಸಂಸತ್ತಿನಲ್ಲಿ ಸಂಸದೆಯಾಗಿ ಪಾಲ್ಗೊಂಡಿದ್ರಿ ಅದರ ಅನುಭವ ಹೇಗಿತ್ತು?
    2019ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ಅಂತಿಮವಾಗಿ ನನ್ನನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿ ರಾಜ್ಯಮಟ್ಟದಿಂದ ಜಿಲ್ಲೆಗೆ ಒಬ್ಬ ಪ್ರತಿನಿಧಿಯಂತೆ ಯುವ ಸಂಸತ್ತಿಗೆ ಕಳಿಸಿಕೊಟ್ಟರು. ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿ ನಾನು  ಸಂಸದೆಯಾಗಿ ಪಾಲ್ಗೊಂಡಿದ್ದೆ.ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು.

  ನಿಮ್ಮ ನೆಚ್ಚಿನ ಸಾಹಿತಿಗಳು ಯಾರು?
      ನನಗೆ ಪೂರ್ಣಚಂದ್ರ ತೇಜಸ್ವಿಯವರ ಬರಹಗಳು ಇಷ್ಟ. ಜೊತೆಗೆ ಎ.ಆರ್. ಮಣಿಕಾಂತ್ ರವರ ಸಾಹಿತ್ಯವು ನನಗೆ ಬಹಳ ಅಚ್ಚುಮೆಚ್ಚು.

    ನಿಮ್ಮ ಮುಂದಿನ ಸಾಹಿತ್ಯ ಕೃಷಿಯ ಬಗ್ಗೆ ತಿಳಿಸಿ?
    ಈಗಾಗಲೆ ನಾನು 'ಚಂದನ ಮನ' ಎಂಬ ಕೃತಿಯನ್ನು ಸಾಹಿತ್ಯಲೋಕಕ್ಕೆ ಅರ್ಪಿಸಿದ್ದೇನೆ. 'ಅವಳು ವೇಶ್ಯೆಯಲ್ಲ' ಎಂಬ ಸಾಮಾಜಿಕ ಕಾದಂಬರಿಯನ್ನು ಜಗತ್ತಿಗೆ ತೆರೆದಿಡುವ ಪ್ರಯತ್ನದಲ್ಲಿದ್ದೇನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನಗಳನ್ನು ರಚಿಸುತ್ತೇನೆ. ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಯೋಜನೆ ರೂಪಿಸಿದ್ದೇನೆ.


     ನಿಮ್ಮ ಸಾಹಿತ್ಯ ಕೃಷಿಗೆ ಪ್ರೇರಕ ಮತ್ತು ಪೋಷಕರು ಯಾರು?
      ನನ್ನ ಸಂಬಂಧಿ ಶರತ್ ಚಕ್ರವರ್ತಿ ಮೊದಲಿಗೆ ಪ್ರೇರೇಪಿಸಿದರು. ನಂತರದ ದಿನಗಳಲ್ಲಿ ಹಾಸನ ಜಿಲ್ಲೆಯ ಉಪವಿಭಾಗ ಅಧಿಕಾರಿಗಳಾಗಿದ್ದ ನಾಗರಾಜ್ ಸರ್ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಅಶೋಕ್ ಸರ್ ಪ್ರೋತ್ಸಾಹದಿಂದಾಗಿ ನಾನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಯಿತು. ಜೊತೆಗೆ ನನ್ನ ತಂದೆ ತಾಯಿಯ ಪ್ರೋತ್ಸಾಹ ನನಗೆ ದೊಡ್ಡ ಸ್ಪೂರ್ತಿ.

        
 ನಿಮ್ಮ ವಯೋಮಾನದ ಯುವಜನತೆಗೆ ನಿಮ್ಮ ಸ್ಪೂರ್ತಿಯ ಮಾತುಗಳೇನು?
   ಸಂಸ್ಕೃತದ ಒಂದು ಶ್ಲೋಕ ಹೀಗಿದೆ.
  "ಕಾಕ ಕೃಷ್ಣ ಪಿಕ ಕೃಷ್ಣ ಕೋಬೇದ ಪಿಕ ಕಾಕಯೋಹೋ
ವಸಂತಕಾಲೇ ಸಂಪ್ರಾಪ್ತೆ
ಕಾಕಾ ಕಾಕಾ ಪಿಕ ಪಿಕಹ"
   ಅಂದ್ರೆ ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು. ಆದರೆ ಅವುಗಳ ನಡುವಿನ ವ್ಯತ್ಯಾಸ ಅರಿವಾಗುವುದು ವಸಂತಕಾಲ ಬಂದಾಗ. ಹಾಗಾಗಿ ಎಲ್ಲರಿಗೂ ಒಂದು ವಸಂತ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೆ ಎದೆಗುಂದದೆ, ನಿರಾಸಕ್ತಿ ತೋರದೆ ನಿರಂತರ ಪರಿಶ್ರಮ ಮತ್ತು ಅಭ್ಯಾಸದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕಡೆಗೆ ತಮ್ಮ ಗಮನ ಹರಿಸಬೇಕು. ಆಗ ಸಾಧನೆ ಸುಲಭ ಸಾಧ್ಯ ಎಂಬುದು ನನ್ನ ಅಭಿಮತ.

ವೆಂಕಟೇಶ್, ಚಂದನರ ತಂದೆಯ ಅಭಿಪ್ರಾಯ?
     ಚಂದನ ಮೊದಲಿನಿಂದಲೂ ಕೇವಲ ಓದಿನಲ್ಲಿ ಅಷ್ಟೇ ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಳು. ಸಾಹಿತ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ.ಅವಳ ಹೆಸರು ಚಂದನ. ಚಂದನ ಅಂದ್ರೆ ಶ್ರೀಗಂಧ. ಶ್ರೀಗಂಧದ ಸುವಾಸನೆ ಯಂತೆ ಅವರ ಸಾಧನೆ ಎಲ್ಲಾ ಕಡೆ ಪಸರಿಸಲಿ ಅನ್ನೋದೇ ತಂದೆಯಾಗಿ ನನ್ನ ಆಸೆ. ಅವಳ ಎಲ್ಲಾ ಆಸೆಗಳಿಗೆ ಕನಸುಗಳಿಗೆ ನಾನು ಸದಾ ಜೊತೆಯಾಗಿರುತ್ತೇನೆ.

   ಸಾಹಿತ್ಯಕ್ಷೇತ್ರದಲ್ಲಿ ಚಂದನ ರಿಗೆ ಈಗಾಗಲೇ 2017ರಲ್ಲಿ ಲಯನ್ ಸಂಸ್ಥೆಯವರು 'ಸಾಹಿತ್ಯಶ್ರೀ' ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ಸಮಾಜ ಕಲ್ಯಾಣ ಸಂಸ್ಥೆಯವರು 'ಸಿರಿಗನ್ನಡ ಸಾಹಿತ್ಯರತ್ನ' ಎಂಬ ಪ್ರಶಸ್ತಿ ನೀಡಿದ್ದಾರೆ. ರಾಜ್ಯಮಟ್ಟದ ಗಮಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಸಾಧನೆ ಇನ್ನಷ್ಟು ಉತ್ತುಂಗಕ್ಕೆ ಏರಲಿ. ಅವರ ಭವಿಷ್ಯದ ಕನಸು ಸಾಕಾರಗೊಳ್ಳಲಿ ಎಂಬುದೇ ನಮ್ಮ ಆಶಯ.


ಸಂದರ್ಶಕರು :
ನಿರಂಜನ್ ಎ.ಸಿ.ಬೇಲೂರು.
ಸುಪ್ರೀತ್ ರಾಜಶೇಖರ್, ಮೊಗಸಾವರ.

Post a Comment

1 Comments