ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಮಟ್ಟದ ಪ್ರಥಮ ಕವಿ-ಕಾವ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಹಾಡ್ಲಹಳ್ಳಿ ನಾಗರಾಜ್ ಅವರ ಸಂದರ್ಶನ.



ಹಾಡ್ಲಹಳ್ಳಿ ನಾಗರಾಜು ಅವರ ವ್ಯಕ್ತಿ ಪರಿಚಯ

ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ 
ಹಾಡ್ಲಹಳ್ಳಿಯ ಕಡುಬಡತನದ ರೈತಾಪಿ 
ಕುಟುಂಬದಲ್ಲಿ ಶ್ರೀ ಗುರುಶಾಂತೇಗೌಡ ಹಾಗು 
ಪುಟ್ಟಮ್ಮನವರ ಮಗನಾಗಿ ಹುಟ್ಟಿದ ಹಾಡ್ಲಹಳ್ಳಿ 
ನಾಗರಾಜ್ ಬಿ.ಎಸ್ಸಿ ಪಧವೀಧರರು.
 ಎನ್.ಸಿ.ಸಿ ಇಲಾಖೆಯಲ್ಲಿ 36ವರ್ಷಗಳ ಸೇವೆಸಲ್ಲಿಸಿ 
ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ 
ಪಾತ್ರರಾಗಿರುವ ಶ್ರೀಯುತರು ಅದೇ 
ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ನಿವೃತ್ತಿ 
ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ 
ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ 
ತೊಡಗಿದ್ದಾರೆ.
 ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ 
ಇವರು ಕನ್ನಡ ಸಾಹಿತ್ಯದಲ್ಲಿ ಇದೂವರಗೆ 
ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ 
ಹಾಗು ನಾನು, ಕುಂಭದ್ರೋಣ 
(ಕತಾಸಂಕಲನಗಳು)
ಬಾಡಿಗೆಬಂಟರು,ಬಿಂಗಾರೆಕಲ್ಲು,ಬೆಂಕಿಯಸುಳಿ,ಗೃಹ
ಪುರಾಣ, ಕಡವೆಬೇಟೆ ನಿಲುವಂಗಿಯ ಕನಸು 
ಕಾದಂಬರಿಗಳನ್ನು ಪ್ರಕಟವಾಗಿವೆ.
ಕಾಡುಹಕ್ಕಿಯ ಹಾದಿನೋಟ ಎಂಬ ಆತ್ಮಕಥಾನಕ 
ಸ್ವರೂಪದ ಪ್ರಬಂಧ ಸಂಕಲನವು 
ಪ್ರಕಟವಾಗಿದೆ.
 ಸುಮಾರು ನಾಲ್ಕು ದಶಕಗಳಿಂದಲೂ 
ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ 
ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು 
ಸಾಹಿತ್ಯಿಕ ಚಟುವಟಿಕೆ,ನಾಟಕ ಹಾಗು ಜನಪದಗೀತಗಾಯನ ಕಾರ್ಯಕ್ರಮಗಳನ್ನು 
ನಡೆಸಿಕೊಂಡು ಬರುತ್ತಿದ್ದಾರೆ.
ಆಕಾಶವಾಣಿಯಲ್ಲಿ ಸಾಧಕರೊಟ್ಟಿಗೆ ಸಂವಾದ 
ಸೇರಿದಂತೆ ಚಿಂತನ ಮುಂತಾದ 
ಕಾರ್ಯಕ್ರಮಗಳು ಪ್ರಸಾರವಾಗಿದೆ. ಸಾಹಿತ್ಯ 
ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ 
ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ 
ಗೌರವಿಸಲಾಗಿದೆ.

    ಪ್ರಶ್ನೆ: ತಮ್ಮ ಬಾಲ್ಯದ ಜೀವನವನ್ನು ಕುರಿತು ತಿಳಿಸಿ?
       ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸಮೀಪದ ಹಾಡ್ಲಹಳ್ಳಿ ನನ್ನೂರು. ಸುಂದರ ಮಲೆನಾಡು ಪ್ರದೇಶ ತಂದೆ ಗುರು ಶಾಂತೇಗೌಡ, ತಾಯಿ ಪುಟ್ಟಮ್ಮ. ಬಹಳ ಕಷ್ಟದ ಬದುಕು. ಏಳುಜನ ಮಕ್ಕಳಲ್ಲಿ ನಾನು ಮೂರನೆಯವನು. ಶಿಸ್ತಿನ ಜೀವನ ಪ್ರಾರಂಭದಲ್ಲಿಯೇ ಶುರುವಾಯಿತು. ಬಾಲ್ಯ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ ಎನ್ನುವುದು ನನ್ನ ಭಾವನೆ. ಹಾಗಾಗಿ ಆ ಬದುಕು ನನ್ನನ್ನು ಬಹಳ ಸದೃಢನನ್ನಾಗಿ  ಮಾಡಿತು.

    ಪ್ರಶ್ನೆ: ಮಲೆನಾಡಿನ ಬದುಕಿನ ಅನುಭವಗಳು ಹೇಗಿತ್ತು?
      ಬೆಟ್ಟಗುಡ್ಡಗಳ ಪ್ರದೇಶ ನಮ್ಮೂರು. ಬೆಳಗ್ಗೆ ನಾಲ್ಕು ಮೂವತ್ತಕ್ಕೆ ಎದ್ದು ಬೆಟ್ಟಗಳನ್ನು ದಾಟಿ ಸೌದೆ ತರಲಿಕ್ಕೆ ಹೋಗಬೇಕಿತ್ತು. ಆ ಹೊತ್ತಿನಲ್ಲಿ ನಿಶಾಚರ ಪ್ರಾಣಿಗಳು ಅಡ್ಡ ಬರುತ್ತಿದ್ದವು. ಹಕ್ಕಿಗಳ ಚಿಲಿಪಿಲಿ ಕಿವಿಗೆ ಬೀಳುತ್ತಿತ್ತು. ಮಲೆನಾಡಿನ ಸಂಪ್ರದಾಯದಂತೆ ಬೈನೆ ಸೆಂದಿಯನ್ನು ಆ ಸಂದರ್ಭದಲ್ಲಿ ಕುಡಿಯುತಿದ್ದೆವು. ಒಂದು ತೋಟ ಬಿಟ್ಟು ಮತ್ತೊಂದು ತೋಟಕ್ಕೆ ಹೋಗಬಾರದೆಂದು ದೆವ್ವದ ಭಯವನ್ನು ಹುಟ್ಟಿಸಿದ್ದರು. ಕೆರೆಯಲ್ಲಿ ಈಜುವುದು, ಕಾಡಿನಲ್ಲಿ ಹೋಗಿ ಹಣ್ಣು-ಹಂಪಲುಗಳನ್ನು ಹುಡುಕುವುದು, ಹಲಸಿನ ಹಣ್ಣಿನ ರುಚಿ ಈಗಲೂ ನಾಲಿಗೆಯ ತುದಿಯಲ್ಲಿದೆ. ಹೀಗೆ ಬಹಳ ಸೊಗಸಾದ ಜೀವನ ಮಲೆನಾಡಿನ ಪರಿಸರದಲ್ಲಿ ಇತ್ತು.

    ಪ್ರಶ್ನೆ:ತಮ್ಮ ಶಿಕ್ಷಣದ ದಾರಿ ಹೇಗೆ ಸಾಗಿತು?
  ಪ್ರಾಥಮಿಕ ಶಿಕ್ಷಣ ಸ್ವಂತ ಊರಾದ ಹಾಡ್ಲ ಹಳ್ಳಿಯಲ್ಲಿ ಮುಗೀತು. ನಂತರ ಮಾಧ್ಯಮಿಕ ಶಿಕ್ಷಣಕ್ಕೆ ಹೆತ್ತೂರಿಗೆ ಹೋಗಬೇಕಾಗಿತ್ತು. ಆ ಕಾಲದ ನಮ್ಮ ಶಿಕ್ಷಣ ವ್ಯವಸ್ಥೆ ಬಹಳ ಶಿಸ್ತಿನಿಂದ ಕೂಡಿತ್ತು. ಹಾಗಾಗಿ ಆ ಶಿಸ್ತು ನಮ್ಮ ಬದುಕನ್ನು ರೂಪಿಸಿತ್ತು. ನಂತರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪದವಿಪೂರ್ವ ಶಿಕ್ಷಣವನ್ನು, ತುಮಕೂರಿನ ಸರಕಾರಿ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಮುಗಿಸಿದೆ.

    ಪ್ರಶ್ನೆ: ಸಾಹಿತ್ಯದ ಕಡೆ ತಮ್ಮ ಒಲವು ಹೇಗೆ ಪ್ರಾರಂಭವಾಯಿತು?
    ಬರಹದ ಪ್ರಾರಂಭ ಹೇಗಾಯಿತು ಅನ್ನೋದು ಅಸ್ಪಷ್ಟ. ಆದರೆ ಬಡತನದ ಬದುಕು ತಂದೆ ತಾಯಿಗಳ ಮೇಲೆ ಮಾಡಿದಂತಹ ಅವಮಾನವನ್ನು, ನಾ ಕಂಡ ಪ್ರಕೃತಿ ದರ್ಶನವನ್ನು, ನಾನು ಅನುಭವಿಸಿದ ನೋವುಗಳನ್ನು ಹೇಗಾದರೂ ತೆರೆದಿಡಬೇಕೆಂಬ ಬಯಕೆ ಇತ್ತು. ಅದಕ್ಕೆ ಬರಹ ಸೂಕ್ತ ಅನಿಸಿತು. ಬಿಎಸ್ಸಿ ಮುಗಿದಮೇಲೆ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲವು ಬರಹದ ತುಣುಕುಗಳನ್ನು ಬರೆದಿಟ್ಟಿದ್ದೆ. ನಂತರ ಕೊಡಗಿನಲ್ಲಿ ಕೆಲಸ ಸಿಕ್ಕಮೇಲೆ ಕೊಡಗಿನ ಶಕ್ತಿ ಪತ್ರಿಕೆ ನಡೆಸಿದ ಹುತ್ತರಿ ಕಥಾಸ್ಪರ್ಧೆಗೆ ನನ್ನ ಬರಹದ ತುಣುಕನ್ನು ಕಳಿಸಿದೆ. ಅದರಲ್ಲಿ ಮೆಚ್ಚುಗೆ ಪಡೆದ ಕಥೆಗಳ ಸಾಲಿನಲ್ಲಿ ನನ್ನ ಹೆಸರು ಇತ್ತು. ಅದು ನನಗೆ ಬಹಳ ದೊಡ್ಡ ಪ್ರೇರಣೆ ನೀಡಿತು. ನಂತರ ಸ್ವಲ್ಪದಿನಗಳ ನಂತರ ಶಕ್ತಿ ಪತ್ರಿಕೆಯಲ್ಲಿ ಕಥೆ ಪ್ರಕಟವಾಗಿತ್ತು. ಹೀಗೆ ನನ್ನ ಸಾಹಿತ್ಯದ ಬದುಕು ಪ್ರಾರಂಭ ಆಯಿತು.

    ಪ್ರಶ್ನೆ:ಶಕ್ತಿ ಪತ್ರಿಕೆಯು ನಿಮಗೆ ನೀಡಿದ ಪ್ರೇರಣೆ ಮತ್ತು ಪ್ರೋತ್ಸಾಹ ಹೇಗಿತ್ತು?
  ನನ್ನ ಕಥೆಯನ್ನು ಮೊದಲಿಗೆ ಶಕ್ತಿ ಪತ್ರಿಕೆಯು ಪ್ರಕಟಿಸಿತು. ನಂತರ ಪತ್ರಿಕೆಯ ಸಂಪಾದಕರಾದ ಗೋಪಾಲಕೃಷ್ಣ ಅವರು ನನ್ನನ್ನು ಕರೆದು ಹುರಿದುಂಬಿಸಿದರು. ಭಾನುವಾರದ ಕಥೆಗಳನ್ನು ಸಂಪಾದನೆ ಮಾಡುವ ಅವಕಾಶ ಸಿಕ್ಕಿತು. ನಂತರ ಹುತ್ತರಿ ವಿಶೇಷಾಂಕವನ್ನು ಸಂಪಾದಿಸುವ ಭಾಗ್ಯ ದೊರಕಿತು.ಕೊನೆಗೆ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಸಂಪಾದಿಸುವ ಅವಕಾಶ ದೊರಕಿತು. ಹೀಗೆ ನನ್ನ ಬರಹಗಳಿಗೆ ಪ್ರೋತ್ಸಾಹವನ್ನು ಶಕ್ತಿ ಪತ್ರಿಕೆ ನೀಡಿತು.

    ಪ್ರಶ್ನೆ: ತಮ್ಮ ಕಥಾಸಂಕಲನಗಳ ಕುರಿತಾಗಿ ತಿಳಿಸಿ.
    ಮೊದಲ ಕಥಾಸಂಕಲನದ ಹೆಸರು ದೇವರ ಬೆಟ್ಟ. ಇದನ್ನು ಯೂನಿಯನ್ ಬ್ಯಾಂಕಿನಲ್ಲಿ 800 ರೂಪಾಯಿ ಸಾಲ ತೆಗೆದುಕೊಂಡು ದೇವರ ಬೆಟ್ಟವನ್ನು ಪ್ರಕಟಿಸಿದೆ. ನಂತರ ಗುದ್ದಿ ನಿಂದ ತೆಗೆದ ಹಣ, ನಕ್ರ ಹಾಗೂ ನಾನು, ಕುಂಭದ್ರೋಣ ಎಂಬ ಕಥಾ ಸಂಕಲನಗಳನ್ನು ಪ್ರಕಟಮಾಡಿದೆ.

       ಪ್ರಶ್ನೆ:ಕಾದಂಬರಿಗಳ ಬರಹ ಹೇಗೆ ಪ್ರಾರಂಭವಾಯಿತು?
      ಜಾಣಗೆರೆ ವೆಂಕಟರಾಮಯ್ಯ ನವರ ಮಾರ್ದನಿ ಎಂಬ ವಾರ ಪತ್ರಿಕೆಯಲ್ಲಿ ಪ್ರಾರಂಭಿಕವಾಗಿ ಕೋಕಿಲ ಎಂಬ ಮಿನಿ ಕಾದಂಬರಿ ಬರೆದೆ. ಇದಕ್ಕೆ ಮೂರು ಪುಟಗಳಷ್ಟು ಮೆಚ್ಚುಗೆ ಬಂತು. ನಂತರ ಕಡವೆ ಬೇಟೆ, ಬಿಂಗಾರೆ ಕಲ್ಲು, ಬಾಡಿಗೆ ಬಂಟರು, ಬೆಂಕಿಯ ಸುಳಿ ಗೃಹ ಪುರಾಣ ಕಾದಂಬರಿಗಳನ್ನು ಪ್ರಕಟಿಸಿದೆ. ನಿಲುವಂಗಿಯ ಕನಸು ಎಂಬ ಕಾದಂಬರಿಯು ನಾಟಕರೂಪಕ್ಕೆ ಬಂದಿದ್ದು ಅದು ಅನೇಕ ಪ್ರದರ್ಶನಗಳನ್ನು ಕಾಣುತ್ತಿದೆ.

      ಪ್ರಶ್ನೆ: ಹೊಯ್ಸಳ ಕಲಾ ಸಂಘದ ಸ್ಥಾಪನೆ ಹೇಗಾಯಿತು?
      ಮಂಗಳ ಪತ್ರಿಕೆಯವರು ಮಂಗಳ ಕಲಾ ಸಾಹಿತ್ಯ ವೇದಿಕೆ ಎಂದು ರಾಜ್ಯದ್ಯಂತ ಸಂಘಟನೆ ಮಾಡುತ್ತಿದ್ದರು. ಆಗ ಆ ಹೆಸರು ನನಗೆ ಹಿಡಿಸಲಿಲ್ಲ. ಆಗ ಹೊಯ್ಸಳ ಕಲಾ ಸಂಘವನ್ನು ಹುಟ್ಟಿ ಹಾಕಿ ಹಲವು ಕಾಲೇಜುಗಳಿಗೆ ತಿರುಗಾಡಿ ಮಲ್ಲೇಶ್ ಗೌಡ, ತಿರುಪತಿಹಳ್ಳಿ ಶಿವಶಂಕರಪ್ಪ, ಅಪ್ಪಾಜಿಗೌಡ, ಮಹಂತೇಶ್ ಮಲ್ಲನಗೌಡ ಇವರನ್ನೆಲ್ಲಾ ಸಂಘಟಿಸಿದೆ. ಈ ವೇದಿಕೆಯ ಅಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು ಕವಿಗೋಷ್ಠಿಗಳನ್ನು ನಡೆಸುವುದು, ಜನಪದ ಗೀತೆಗಳನ್ನು ಹಾಡುವುದು, ನಾಟಕಗಳನ್ನು ಮಾಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಿದೆವು.

     ಪ್ರಶ್ನೆ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ ಆ ಕುರಿತಂತೆ ತಮ್ಮ ಅನಿಸಿಕೆ ಏನು?
    ಕೇಂದ್ರ ಕನ್ನಡ ಸಾಹಿತಿ ವೇದಿಕೆಯಲ್ಲಿ ಕವಿಗಳು ಮತ್ತು ಸಹೃದಯರು ಒಟ್ಟಾಗಿ ಸಾಗುತ್ತಿರುವುದರಿಂದ ಯುವ ಬರಹಗಾರರನ್ನು ಪ್ರೋತ್ಸಾಹಿಸಲಿಕ್ಕೆ ಬಹಳ ಒಳ್ಳೆಯ ವೇದಿಕೆಯಾಗಿದೆ. ಇಂತಹ ವೇದಿಕೆಯ ಅಡಿಯಲ್ಲಿ ಪ್ರಥಮ ಕವಿಕಾವ್ಯ ಸಮ್ಮೇಳನದಲ್ಲಿ ನಾನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಬಹಳ ಸಂತಸ ಇದೆ.

      ಪ್ರಶ್ನೆ:ಪ್ರಶಸ್ತಿಗಳ ಕುರಿತಂತೆ ತಮ್ಮ ಅಭಿಮತ ಏನು?
     ಪ್ರಶಸ್ತಿಗಳನ್ನು ನಾವು ಅರಸಿ ಹೋಗುವುದರಲ್ಲಿ ಯಾವುದೇ ಬೆಲೆ ಇಲ್ಲ. ನಮ್ಮ ಕಾರ್ಯ ಪರಿಪೂರ್ಣ ವಾಗಿದ್ದರೆ, ಜನ ಮೆಚ್ಚಿಕೊಂಡರೆ ಪ್ರಶಸ್ತಿಗಳು ನಮ್ಮನ್ನು ಅರಸಿ ಬರುತ್ತವೆ ಎನ್ನುವುದು ನನ್ನ ವಿಶ್ವಾಸ.

     ಪ್ರಶ್ನೆ:ತಾವು ಒಬ್ಬ ಪ್ರಗತಿಪರ ರೈತರಾಗಿ ಜೀವನವನ್ನು ಸಾಗಿಸುತ್ತಾ ಇದ್ದೀರಾ. ರೈತ ಬದುಕಿನ ಬಗ್ಗೆ ನಿಮ್ಮ ಅನುಭವ ಏನು?
       ಕೃಷಿ ಜೀವನ ಬಹಳ ಸೊಗಸಾಗಿದೆ. ನಗರಜೀವನದ ರಾಜಕೀಯ ತಾಕಲಾಟ ಗಳಿಂದ, ಗೊಂದಲಗಳಿಂದ ದೂರವಾಗಿ  ಹಳ್ಳಿಯಲ್ಲಿ ಕೃಷಿ ಮಾಡುತ್ತಾ ಭೂಮಿತಾಯಿಯ ಜೊತೆಗೆ ಬಹಳ ಸುಖದ ಜೀವನವನ್ನು ಅನುಭವಿಸುತ್ತಿದ್ದೇನೆ. ಇದು ನನಗೆ ತೃಪ್ತಿಯನ್ನು ತಂದಿದೆ ಎನ್ನುತ್ತಾರೆ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು.

    ಸಂದರ್ಶಕರು:
ಸುಪ್ರೀತ್ ರಾಜಶೇಖರ್, ಮೊಗಸಾವರ
ನಿರಂಜನ್ ಎಸಿ ಬೇಲೂರು.

Post a Comment

0 Comments